ಚಿಕನ್ ಕರಿ ವಿಚಾರಕ್ಕೆ ಮಾವನನ್ನೇ ಹತ್ಯೆ ಮಾಡಿದ ಸೋದರಳಿಯ!

ಕೇರಳ: ಚಿಕನ್ ಕರಿ ವಿಚಾರಕ್ಕೆ ನಡೆದ ಜಗಳದಲ್ಲಿ ಸೋದರಳಿಯನೇ ಮಾವನನ್ನು ಹತ್ಯೆಗೈದಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೌಂದನೂರ್‌ನಲ್ಲಿ ಇಂದು(ಏ.20) ನಡೆದಿದೆ.

ಒಳಕಪತಿಯ ಕೌಂದನೂರ್ ಗ್ರಾಮದ ನಿವಾಸಿ ಸೆಂಥಿಲ್ ಕುಮಾರ್ ಮೃತ ವ್ಯಕ್ತಿ. ಪ್ರಭಾಕರನ್ ಆರೋಪಿ.

ಘಟನೆ ನಡೆಯುತ್ತಿದ್ದಂತೆಯೇ ಪ್ರಭಾಕರನ್ ಸ್ಥಳದಿಂದ ಪರಾರಿಯಾಗಿದ್ದು, ತಮಿಳುನಾಡಿಗೆ ಕಾಲ್ಕಿತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಿವಾಹಿತರಾಗಿದ್ದ ಮೃತ ಸೆಂಥಿಲ್ ಕುಮಾರ್ ತಮ್ಮ ಸಹೋದರಿ ಹಾಗೂ ಆಕೆಯ ಪುತ್ರ ಪ್ರಭಾಕರನ್‌ನೊಂದಿಗೆ ವಾಸಿಸುತ್ತಿದ್ದರು. ಘಟನೆಯ ವೇಳೆ ಸೆಂಥಿಲ್ ಕುಮಾರ್ ಹಾಗೂ ಆರೋಪಿ ಪ್ರಭಾಕರನ್ ಇಬ್ಬರೂ ಮದ್ಯ ಸೇವಿಸಿದ್ದರು. ಊಟ ಮಾಡುವಾಗ ಅವರಿಬ್ಬರ ನಡುವೆ ಮಾತಿನ ಚಮಕಿ ನಡೆದಿದೆ ಎನ್ನಲಾಗಿದೆ.

ಮೃತ ಸೆಂಥಿಲ್ ಕುಮಾರ್ ಮನೆಯಲ್ಲಿ ಚಿಕನ್ ಕರಿ ಸಿದ್ಧಪಡಿಸಿದ್ದರು. ಆದರೆ ಅದನ್ನು ಆರೋಪಿ ಪ್ರಭಾಕರನ್‌ನೊಂದಿಗೆ ಹಂಚಿಕೊಂಡಿರಲಿಲ್ಲ. ಹೀಗಾಗಿ ಅವರಿಬ್ಬರ ನಡುವೆ ವಾಗ್ವಾದ ನಡೆಯಿತು ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ತಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಸೆಂಥಿಲ್ ಕುಮಾರ್‌ರನ್ನು ಅಡ್ಡಗಟ್ಟಿದ ಪ್ರಭಾಕರನ್, ಅವರ ಮೇಲೆ ಬಿಳಿ ಬಣ್ಣದ ಪೈಪ್‌ನಿಂದ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಯಲ್ಲಿ ಸೆಂಥಿಲ್ ಕುಮಾರ್ ತಲೆ ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಂಥಿಲ್ ಕುಮಾರ್ ಮೇಲೆ ಹಲ್ಲೆ ನಡೆಸುತ್ತಿದ್ದಂತೆಯೇ ಪ್ರಭಾಕರನ್ ಮೋಟರ್ ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ತಮಿಳುನಾಡು ಪೊಲೀಸರ ನೆರವಿನೊಂದಿಗೆ ಆತನನ್ನು ಪತ್ತೆ ಹಚ್ಚಲು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಕೊಳಿಂಜಾಪಾರ ಪೊಲೀಸ್ ಠಾಣೆಯಲ್ಲಿ ಹತ್ಯೆಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮರಣೋತ್ತರ ಪರೀಕ್ಷೆಯ ಬಳಿಕ, ಮೃತದೇಹವನ್ನು ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!