ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್‌ ಆಗಬೇಕಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಲ್ಯಾಂಡಿಂಗ್: ಪ್ರಯಾಣಿಕರಿಂದ ಸಂಸ್ಥೆ ವಿರುದ್ಧ ಆಕ್ರೋಶ

ಹುಬ್ಬಳ್ಳಿ: ಪ್ಲೈ 91 ವಿಮಾನವು ಲ್ಯಾಂಡಿಂಗ್ ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಲ ಕಾಲ ಆಕಾಶದಲ್ಲೇ ಸುತ್ತಾಡಿ, ಬಳಿಕ ಬೆಂಗಳೂರಿನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ಈ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿದ್ದು, ವಿಮಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಘಟನೆಗೆ ಹವಾಮಾನ ವೈಪರೀತ್ಯ ಅಥವಾ ತಾಂತ್ರಿಕ ದೋಷ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಆದರೆ, ವಿಮಾನವನ್ನು ಸುರಕ್ಷಿತವಾಗಿ ಇಳಿಸಿರುವುದರಿಂದ ದೊಡ್ಡ ಅನಾಹುತ ತಪ್ಪಿದೆ.

ಈ ಕುರಿತು ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಜಯಕುಮಾರ್ ಅರಳಗುಂಡಗಿ ಅವರು ಮಾತನಾಡಿ, ಬಿರುಗಾಳಿಯ ಕಾರಣದಿಂದ ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡ್ ಆಗಲಿಲ್ಲ. ಸುಮಾರು 15ರಿಂದ 20 ಪ್ರಯಾಣಿಕರು ಇದ್ದರು. ಲ್ಯಾಂಡಿಂಗ್ ವೇಳೆ ನಾವು ಜೀವಂತವಾಗಿ ಉಳಿಯುತ್ತೇವೋ ಇಲ್ಲವೋ ಎಂದು ಭಯಗೊಂಡಿದ್ದೆವು ಎಂದು ಹೇಳಿದ್ದಾರೆ. ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಇರಲಿಲ್ಲ, ಆದರೆ ಭಾರೀ ಗಾಳಿ ಇದ್ದುದರಿಂದ ಪೈಲಟ್ ಸಮಯ ಪ್ರಜ್ಞೆ ತೋರಿಸಿ ವಿಮಾನವನ್ನು ಸುರಕ್ಷಿತವಾಗಿ ತಿರುಗಿಸಿದ್ದಾರೆ ಎಂದು ತಿಳಿಸಿದರು.

ನಿಗದಿತ ವೇಳೆಗೆ (ಸಂಜೆ 4:30) ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ, ಸುಮಾರು ರಾತ್ರಿ ಏಳು ಗಂಟೆಯ ನಂತರ ಬೆಂಗಳೂರಿನಲ್ಲಿ ಇಳಿದಿದೆ. ಆದರೆ, ಬಳಿಕ ವಿಮಾನ ಸಂಸ್ಥೆ ಪ್ರಯಾಣಿಕರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೇ, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಸ್ವಂತ ವೆಚ್ಚದಲ್ಲಿ ಟ್ಯಾಕ್ಸಿ ಮಾಡಿಕೊಂಡು ಬರಬೇಕಾಯಿತು. ಈ ಘಟನೆ ಬಳಿಕ ತಮ್ಮ ಪತ್ನಿ ಇನ್ನೂ ಭಯದಲ್ಲಿದ್ದಾರೆ ಎಂದು ಅವರು ಹೇಳಿದರು. ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದು ಜಯಕುಮಾರ್ ಒತ್ತಾಯಿಸಿದ್ದಾರೆ.

error: Content is protected !!