ಕಾರು – ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; 6 ಮಂದಿ ಸಜೀವ ದಹನ

ಬೆಂಗಳೂರು: ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಹೊತ್ತಿಯುರಿದಿದ್ದು, 6 ಮಂದಿ ಸಜೀವ ದಹನವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಸೇತುವೆ ಬಳಿಯ ಶಾಂತಪುರ ಕ್ರಾಸ್ ಹತ್ತಿರ ಬೀದರ್ ಬೆಂಗಳೂರು ಹೆದ್ದಾರಿಯಲ್ಲಿ ಇಂದು(ಏ.17) ಬೆಳಗ್ಗೆ ನಡೆದಿದೆ.

ಲಿಂಗಸುಗೂರಿನಿಂದ ಕಲಬುರ್ಗಿ ಕಡೆಗೆ ಹೊರಟಿದ್ದ ಖಾಸಗಿ ಬಸ್ ಹಾಗೂ ಲಿಂಗಸುಗೂರು ಕಡೆಗೆ ಬರುತ್ತಿದ್ದ ಕಾರಿನ ಮಧ್ಯೆ ಅಪಘಾತ ಸಂಭವಿಸಿದ್ದು, ಢಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಕಾರು ಮತ್ತು ಬಸ್ ಸಂಪೂರ್ಣ ಸುಟ್ಟು ಕರಕಲಾಗಿವೆ.

ಖಾಸಗಿ ಬಸ್ಸಿನಲ್ಲಿದ್ದ ಯಾರಿಗೂ ಕೂಡ ಯಾವುದೇ ರೀತಿಯ ಜೀವ ಹಾನಿ ಸಂಭವಿಸಿಲ್ಲ. ಆದರೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಸುಟ್ಟು ಕರಕಲಾಗಿದ್ದಾರೆ ಎನ್ನಲಾಗಿದೆ. ಸುಟ್ಟ ಅವಶೇಷಗಳ ಮಧ್ಯೆ ನಾಲ್ಕು ಜನರ ತಲೆ ಬುರುಡೆಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸುರಪುರ ಠಾಣೆಯ ಪಿ.ಐ ಉಮೇಶ ಎಂ ಸೇರಿದಂತೆ ಸಿಬ್ಬಂದಿಗಳು ಕೂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

error: Content is protected !!