
ವಾಷಿಂಗ್ಟನ್: ಇಸ್ರೇಲ್ ಮತ್ತು ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಏರ್ಪಟ್ಟಿದ್ದು, ಇಂದು(ಏ.17) ಮುಂಜಾನೆ 3-30ರಿಂದ ಜಾರಿಯಾಗಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿದ್ದು, ಈ ಕದನ ವಿರಾಮವು ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಗ್ಗೆ 3:30ಕ್ಕೆ ಪ್ರಾರಂಭವಾಗುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ. ಅಲ್ಲದೆ ಇದು ತಾವು ನಿಲ್ಲಿಸುತ್ತಿರುವ 10ನೇ ಜಾಗತಿಕ ಯುದ್ಧವೆಂದೂ ಪುನರುಚ್ಚರಿಸಿದ್ದಾರೆ.
“ಉಭಯ ದೇಶಗಳ ಗೌರವಾನ್ವಿತ ಪ್ರಧಾನಿಗಳ ಜೊತೆ ನಾನು ಮಾತುಕತೆ ನಡೆಸಿದ್ದು, ಇಬ್ಬರು ನಾಯಕರು ತಮ್ಮ ದೇಶದಲ್ಲಿ ಶಾಂತಿ ಸ್ಥಾಪಿಸಲು ಸಹಮತ ಸೂಚಿಸಿದ್ದಾರೆ ಎಂದು ಟ್ರಂಪ್ ತನ್ನ ಟ್ರುಥ್ ತಾಣದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ನಾನು ಈಗಾಗಲೇ ಜಾಗತಿಕವಾಗಿ 9 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಇದೀಗ ಇಸ್ರೇಲ್-ಲೆಬನಾನ್ ನಡುವಿನ ಯುದ್ಧ ನಿಲ್ಲಿಸಿದ್ದು, 10ನೇ ಯುದ್ಧವನ್ನು ನಿಲ್ಲಿಸಿದ ಕೀರ್ತಿ ನನ್ನದಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
“ಇಸ್ರೇಲ್ ಮತ್ತು ಲೆಬನಾನ್” 34 ವರ್ಷಗಳಲ್ಲಿ ಮೊದಲ ಬಾರಿಗೆ ವಾಷಿಂಗ್ಟನ್ ಡಿಸಿಯಲ್ಲಿ ಭೇಟಿಯಾಗಿವೆ ಎಂದು ಟ್ರಂಪ್ ಹೇಳಿದರು. ಅಲ್ಲದೇ ಎರಡೂ ದೇಶಗಳು “ಶಾಶ್ವತ ಶಾಂತಿ” ಸಾಧಿಸುವ ನಿಟ್ಟಿನಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ಜಂಟಿ ಮುಖ್ಯಸ್ಥರ ಅಧ್ಯಕ್ಷ ಡಾನ್ ಕೇನ್ ಅವರಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು.