ಗುರುಪುರದಲ್ಲಿ ನಿಲ್ಲದ ರಕ್ತದೋಕುಳಿ: ಬಸ್-ಲಾರಿ ಮುಖಾಮುಖಿ ಢಿಕ್ಕಿ- ಇಬ್ಬರು ಗಂಭೀರ

ಗುರುಪುರ: ಮಂಗಳೂರು ಹೊರವಲಯದ ಗುರುಪುರ ಕೈಕಂಬದ ಬಾಮಿ ಶಾಲೆಯಿಂದ ಅನತಿ ದೂರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಖಾಸಗಿ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಚಾಲಕರು ಗಂಭೀರವಾಗಿ ಗಾಯಗೊಂಡಿದ್ದು, ಹಲವು ಪ್ರಯಾಣಿಕರು ಆಸ್ಪತ್ರೆ ಪಾಲಾಗಿದ್ದಾರೆ. ಇದು ಕಳೆದ ಕೆಲವೇ ದಿನಗಳ ಅಂತರದಲ್ಲಿ ಇದೇ ಸ್ಥಳದಲ್ಲಿ ನಡೆದ ಮೂರನೇ ಪ್ರಮುಖ ಅಪಘಾತವಾಗಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

ಖಾಸಗಿ ಬಸ್ ಮತ್ತು ಲಾರಿ ವೇಗವಾಗಿ ಚಲಿಸುತ್ತಿದ್ದಾಗ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಢಿಕ್ಕಿಯ ತೀವ್ರತೆಗೆ ಬಸ್ ಚಾಲಕನ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಸ್ಟೇರಿಂಗ್ ಬಳಿ ಸಿಲುಕಿಕೊಂಡಿದ್ದರು. ಇತ್ತ ಲಾರಿ ಚಾಲಕ ಕ್ಯಾಬಿನ್ ಒಳಗೆ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಸಾರ್ವಜನಿಕರು ಹರಸಾಹಸ ಪಟ್ಟು ಕ್ಯಾಬಿನ್ ತುಂಡರಿಸಿ ಲಾರಿ ಚಾಲಕನನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಅಪಘಾತಗಳ ‘ಹಾಟ್‌ಸ್ಪಾಟ್’ ಆದ ಗುರುಪುರ:
ಗುರುಪುರ ಪೇಟೆಯ ಈ ಭಾಗ ಈಗ ಕರಾವಳಿಯ ಅತ್ಯಂತ ಅಪಾಯಕಾರಿ ‘ಅಪಘಾತ ವಲಯ’ವಾಗಿ ಬದಲಾಗಿದೆ. ಇಲ್ಲಿನ ರಸ್ತೆ ಅತ್ಯಂತ ಕಿರಿದಾಗಿದ್ದು, ರಸ್ತೆಯ ಪಕ್ಕದಲ್ಲಿಯೇ ಅಂಗಡಿ ಮುಂಗಟ್ಟುಗಳು ಮತ್ತು ಹಳೆಯ ಮನೆಗಳಿವೆ. ಈ ಹಿಂದೆ ಹಲವು ವಾಹನಗಳು ನೇರವಾಗಿ ಅಂಗಡಿಗಳಿಗೆ ನುಗ್ಗಿ ಅಪಘಾತ ಸಂಭವಿಸಿದ ಉದಾಹರಣೆಗಳಿವೆ.
ಅಪಘಾತಕ್ಕೆ ಕೇವಲ ರಸ್ತೆಯ ಅಗಲವಷ್ಟೇ ಕಾರಣವಲ್ಲ, ಬದಲಿಗೆ ಇಲ್ಲಿನ ಮೂಲಸೌಕರ್ಯದ ಕೊರತೆಯೂ ಎದ್ದು ಕಾಣುತ್ತಿದೆ. ರಾತ್ರಿ ವೇಳೆ ಬೀದಿ ದೀಪಗಳು ಬೆಳಗುತ್ತಿಲ್ಲ, ರಸ್ತೆಯಲ್ಲಿ ಅಲ್ಲಲ್ಲಿ ಭಾರಿ ಗಾತ್ರದ ಗುಂಡಿಗಳಿವೆ. ಮಳೆಗಾಲದ ಮುನ್ನವೇ ಗುಂಡಿ ಬಿದ್ದಿರುವ ರಸ್ತೆಯಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಅಲ್ಲದೆ, ರಸ್ತೆ ಬದಿಯಲ್ಲಿರುವ ಪಾಳುಬಿದ್ದ ಹಳೆಯ ಕಟ್ಟಡಗಳಿದ್ದು ವಾಹನ ಚಾಲನೆಗೆ ಅಡಚಣೆಯಾಗುತ್ತಿದೆ. ಕೊಂಚ ಏಮಾರಿದರೂ ಇಲ್ಲಿ ಅಫಘಾತ ಕಟ್ಟಿಟ್ಟ ಬುತ್ತಿ.

 

ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಈಗಿರುವ ಗುರುಪುರ ಪೇಟೆ ರಸ್ತೆಯು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಸದ್ಯ ಗುರುಪುರ ಭಾಗವನ್ನು ಹೊರತುಪಡಿಸಿ ಬದಲಿ ಮಾರ್ಗದಲ್ಲಿ ನೂತನ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. “ಈ ಹೊಸ ಹೆದ್ದಾರಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕು. ಆ ಮೂಲಕ ಗುರುಪುರದ ಈ ಸಾವಿನ ಹಾದಿಯಿಂದ ಪ್ರಯಾಣಿಕರನ್ನು ಮುಕ್ತಗೊಳಿಸಬೇಕು” ಎಂದು ಸಾರ್ವಜನಿಕರು ಆಕ್ರೋಶದೊಂದಿಗೆ ಆಗ್ರಹಿಸಿದ್ದಾರೆ.

error: Content is protected !!