ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕಾಲ ಕದನ ವಿರಾಮ ಘೋಷಣೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಫೆಬ್ರವರಿ 28 ರಿಂದ ನಡೆಯುತ್ತಿದ್ದ ಸಂಘರ್ಷಕ್ಕೆ ಸದ್ಯ ವಿರಾಮ ಬಿದ್ದಿದ್ದು, ಇರಾನ್‌ನ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಸಾರಿಗೆಗಾಗಿ ಮುಕ್ತಗೊಳಿಸಲು ಒಪ್ಪಿಗೆ ನೀಡಲಾಗಿದೆ. ಇದು ಭಾರತಕ್ಕೆ ಸಮಾಧಾನದ ಸಂಗತಿಯಾದರೂ, ದೇಶದಲ್ಲಿನ ಅಡುಗೆ ಅನಿಲ (LPG) ಬಿಕ್ಕಟ್ಟು ತಕ್ಷಣವೇ ಬಗೆಹರಿಯುವ ಸಾಧ್ಯತೆ ಕಡಿಮೆ ಎಂದು ವರದಿಗಳು ತಿಳಿಸಿವೆ.

ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿ ನೀಡಿದ್ದರೂ, ಅದು “ನಿಯಂತ್ರಿತ ಸಂಚಾರ ಪ್ರೋಟೋಕಾಲ್” ಅಡಿಯಲ್ಲಿ ನಡೆಯಲಿದೆ. ಅಂದರೆ, ಇರಾನ್ ಸಶಸ್ತ್ರ ಪಡೆಗಳ ಸಂಪೂರ್ಣ ನಿಗಾವಣೆಯಲ್ಲಿ ಈ ಮಾರ್ಗ ಕಾರ್ಯನಿರ್ವಹಿಸಲಿದೆ. ಭಾರತದ ಸುಮಾರು 33 ಕೋಟಿ ಕುಟುಂಬಗಳು ಎಲ್‌ಪಿಜಿ ಸಿಲಿಂಡರ್‌ಗಾಗಿ ಕಾಯುತ್ತಿದ್ದು, ಅಡೆತಡೆಯಿಲ್ಲದ ಪೂರೈಕೆ ಆರಂಭವಾಗಲು ಇನ್ನೂ ಕಾಲಾವಕಾಶ ಬೇಕಿದೆ.
ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ಕನಿಷ್ಠ 3 ರಿಂದ 6 ವಾರಗಳ ಸಮಯ ಬೇಕಾಗಬಹುದು ಎಂದು ತೈಲ ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಅಲ್ಲಿಯವರೆಗೆ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮತ್ತು ಪೂರೈಕೆಯಲ್ಲಿನ ವಿಳಂಬ ಮುಂದುವರಿಯುವ ಸಾಧ್ಯತೆ ಇದೆ.