ಅಮೆರಿಕದ ಬೆದರಿಕೆಗೆ ಜಗ್ಗದ ಇರಾನ್; ದೇಶದ 14 ಕೋಟಿ ಜನರು ಬಲಿದಾನಕ್ಕೆ ಸಿದ್ಧ ಎಂದ ಪೆಜೆಶ್ಕಿಯಾನ್

ಟೆಹ್ರಾನ್: ವಿಶ್ವದ ಬಲಿಷ್ಠ ರಾಷ್ಟ್ರ ಅಮೆರಿಕದ ಅಂತಿಮ ಗಡುವು ಒಂದೆಡೆ, ಇಸ್ರೇಲ್‌ನ ಕ್ಷಿಪಣಿಗಳ ಅಬ್ಬರ ಇನ್ನೊಂದೆಡೆ. ಇವೆಲ್ಲದರ ನಡುವೆ ಇರಾನ್ ಇಂದು ವಿಶ್ವಕ್ಕೆ ಒಂದು ಭಾವನಾತ್ಮಕ ಸಂದೇಶ ರವಾನಿಸಿದೆ. “ನಮ್ಮ ಸೇತುವೆಗಳನ್ನು ನೀವು ಧ್ವಂಸಗೊಳಿಸಬಹುದು, ನಮ್ಮ ವಿದ್ಯುತ್ ಸ್ಥಾವರಗಳನ್ನು ಕತ್ತಲೆಗೆ ದೂಡಬಹುದು. ಆದರೆ, ಇರಾನಿನ ಜನರ ಕೆಚ್ಚೆದೆಯನ್ನು ನಂದಿಸಲು ನಿಮ್ಮಿಂದ ಸಾಧ್ಯವಿಲ್ಲ” ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಗುಡುಗಿದ್ದಾರೆ.

ದೇಶದ ಅಸ್ತಿತ್ವಕ್ಕಾಗಿ 14 ಕೋಟಿ ಜನರು ತಮ್ಮ ಪ್ರಾಣವನ್ನು ಬಲಿ ಕೊಡಲು ಸಿದ್ಧರಿದ್ದಾರೆ ಎಂದು ಅವರು ಹೇಳಿದಾಗ, ಟೆಹ್ರಾನ್‌ನ ಬೀದಿಗಳಲ್ಲಿ ಮೊಳಗಿದ ಜಯಘೋಷಗಳು ಈ ಹೋರಾಟ ಕೇವಲ ಮಿಲಿಟರಿಯದ್ದಲ್ಲ, ಬದಲಾಗಿ ಪ್ರತಿ ಇರಾನಿ ಪ್ರಜೆಯದ್ದಾಗಿದೆ ಎಂಬುದನ್ನು ಸಾಬೀತುಪಡಿಸಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಗೆ ಕಿಂಚಿತ್ತೂ ಹೆದರದ ಇರಾನ್, ಗುಲಾಮಗಿರಿಯ ಬದುಕಿಗಿಂತ ಗೌರವಯುತ ಸಾವು ಲೇಸು ಎಂಬ ನಿಲುವಿಗೆ ಅಂಟಿಕೊಂಡಿದೆ.

ಹೊರ್ಮುಜ್ ಜಲಸಂಧಿಯ ನೀಲಿ ಅಲೆಗಳ ಮೇಲೆ ಈಗ ಯುದ್ಧದ ಕಪ್ಪು ಛಾಯೆ ಆವರಿಸಿದೆ. ಅಮೆರಿಕವು ತನ್ನ ವಿನಾಶಕಾರಿ ಶಕ್ತಿಯನ್ನು ತೋರಿಸಲು ಮುಂದಾಗಿದ್ದರೆ, ಇರಾನ್ ಮಾತ್ರ ತನ್ನ ಮಣ್ಣಿನ ಮೇಲಿನ ಭಕ್ತಿ ಮತ್ತು ಛಲವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಅಮೆರಿಕದ ಆರ್ಥಿಕ ನಿರ್ಬಂಧಗಳು ಮತ್ತು ದಾಳಿಯ ಎಚ್ಚರಿಕೆಗಳನ್ನು ʻಭ್ರಮೆ’ ಎಂದು ಕರೆದಿರುವ ಇರಾನ್, ಇತಿಹಾಸದ ಪುಟಗಳಲ್ಲಿ ಪರ್ಷಿಯನ್ ಸಾಮ್ರಾಜ್ಯದ ಶೌರ್ಯವನ್ನು ಮತ್ತೊಮ್ಮೆ ನೆನಪಿಸುತ್ತಿದೆ.

ಯುದ್ಧದ ಈ ಭೀಕರ ಕ್ಷಣಗಳಲ್ಲಿ ಸಾವು-ನೋವುಗಳ ಆತಂಕವಿದ್ದರೂ, ಇರಾನಿನ ಜನರಲ್ಲಿ ಒಂದು ವಿಚಿತ್ರವಾದ ಶಾಂತಿ ಮತ್ತು ಹೋರಾಟದ ಕಿಚ್ಚು ಕಾಣಿಸುತ್ತಿದೆ. ತಾಯಿ ನೆಲದ ರಕ್ಷಣೆಗಾಗಿ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಒಂದಾಗಿ ನಿಂತಿರುವುದು ಜಾಗತಿಕ ಸಮುದಾಯವನ್ನೇ ಚಕಿತಗೊಳಿಸಿದೆ. ಇದು ಕೇವಲ ಭೂಭಾಗಕ್ಕಾಗಿ ನಡೆಯುತ್ತಿರುವ ಯುದ್ಧವಲ್ಲ, ಬದಲಾಗಿ ಜಗತ್ತಿನ ಎದುರು ತಲೆ ಎತ್ತಿ ನಿಲ್ಲುವ ಒಂದು ಪುಟ್ಟ ರಾಷ್ಟ್ರದ ಸ್ವಾಭಿಮಾನದ ಪರೀಕ್ಷೆಯಾಗಿದೆ.

ಈ ಕೆಚ್ಚೆದೆಯ ಹೋರಾಟವು ಇರಾನ್‌ಗೆ ವಿಜಯ ತರುತ್ತದೆಯೇ ಅಥವಾ ವಿನಾಶಕ್ಕೆ ದಾರಿ ಮಾಡುತ್ತದೆಯೇ ಎಂಬುದು ಕಾಲಕ್ಕೇ ಬಿಟ್ಟ ವಿಚಾರ. ಆದರೆ, ಅಮೆರಿಕದಂತಹ ಮಹಾಶಕ್ತಿಯ ಎದುರು ಎದೆಯುಬ್ಬಿಸಿ ನಿಂತಿರುವ ಇರಾನಿನ ಈ ಧೈರ್ಯ ಮಾತ್ರ ವಿಶ್ವದ ಯುದ್ಧ ಇತಿಹಾಸದಲ್ಲಿ ಒಂದು ರೋಚಕ ಅಧ್ಯಾಯವಾಗಿ ದಾಖಲಾಗುವುದಂತೂ ನಿಜ.

error: Content is protected !!