ಮಡಿಕೇರಿ: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ಕೊಡಗು ಮೂಲದ ಮಹಿಳೆ ಹಾಗೂ ಅವರ ಇರಾನಿ ಪತಿಯ ಬದುಕಿನಲ್ಲಿ ಆತಂಕ ಮೂಡಿಸಿದೆ. ದೀರ್ಘ ರಜೆಯ ಮೇಲೆ ತಾಯ್ನಾಡಿಗೆ ಬಂದಿದ್ದ ಈ ದಂಪತಿ, ವಿಮಾನ ಸೇವೆ ರದ್ದಾದ ಕಾರಣ ಇರಾನ್‌ಗೆ ಮರಳಲಾಗದೆ ಕೊಡಗಿನಲ್ಲೇ ಅತಂತ್ರರಾಗಿ ಸಿಲುಕಿಕೊಂಡಿದ್ದಾರೆ.

ಮೂಲತಃ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಾಂತೂರಿನವರಾದ ನವೀನ್ ಅವರು ಸುಮಾರು 40 ವರ್ಷಗಳ ಹಿಂದೆ ಇರಾನ್ ಪ್ರಜೆ ನಾದರ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಕಳೆದ ಹಲವು ದಶಕಗಳಿಂದ ಇರಾನ್‌ನ ಬೋಜ್‌ನೂರ್ ಪ್ರದೇಶದಲ್ಲಿ ನೆಲೆಸಿರುವ ಈ ದಂಪತಿ, ಅಲ್ಲಿ ಬೃಹತ್ ಹಣ್ಣಿನ ತೋಟಗಳು ಹಾಗೂ ಕಟ್ಟಡ ನಿರ್ಮಾಣ ವ್ಯವಹಾರವನ್ನು ನಡೆಸುತ್ತಿದ್ದಾರೆ. ಇವರ ಇಬ್ಬರು ಮಕ್ಕಳು ಇರಾನ್‌ನಲ್ಲೇ ಇಂಜಿನಿಯರ್ ಹಾಗೂ ವಾಸ್ತುಶಿಲ್ಪಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿ ವರ್ಷದಂತೆ ಕಳೆದ ಡಿಸೆಂಬರ್‌ನಲ್ಲಿ ಕೊಡಗಿಗೆ ಬಂದಿದ್ದ ದಂಪತಿ, ಮಾರ್ಚ್ 16ರಂದು ಬೆಂಗಳೂರಿನಿಂದ ಶಾರ್ಜಾ ಮೂಲಕ ಇರಾನ್‌ಗೆ ಮರಳಲು ಟಿಕೆಟ್ ಬುಕ್ ಮಾಡಿದ್ದರು. ಆದರೆ ಯುದ್ಧದ ಹಿನ್ನೆಲೆಯಲ್ಲಿ ವಿಮಾನ ಸಂಚಾರ ರದ್ದಾಯಿತು. ನಂತರ ಏಪ್ರಿಲ್ 15ಕ್ಕೆ ಮರುಬುಕಿಂಗ್ ಮಾಡಿದ್ದರೂ ಸಹ, ವಿಮಾನ ಸೇವೆ ಪುನಾರಂಭಗೊಳ್ಳದ ಕಾರಣ ತಾಯ್ನಾಡಿನಲ್ಲೇ ಉಳಿಯುವಂತಾಗಿದೆ.
ಪ್ರಸ್ತುತ ದಂಪತಿಯನ್ನು ಕಾಡುತ್ತಿರುವ ದೊಡ್ಡ ಆತಂಕವೆಂದರೆ ಅವರ ಪಾಸ್‌ಪೋರ್ಟ್ ಅವಧಿ. ಬರುವ ಮೇ ತಿಂಗಳಲ್ಲಿ ಪಾಸ್‌ಪೋರ್ಟ್ ಅವಧಿ ಮುಕ್ತಾಯಗೊಳ್ಳಲಿದ್ದು, ಒಂದು ವೇಳೆ ಯುದ್ಧ ಮುಂದುವರಿದರೆ ಕಾನೂನಾತ್ಮಕವಾಗಿ ಇರಾನ್‌ಗೆ ಮರಳುವುದು ಹೇಗೆ ಎಂಬ ಚಿಂತೆ ಅವರನ್ನು ಆವರಿಸಿದೆ. ಇರಾನ್‌ನಲ್ಲಿ ತಮ್ಮ ವ್ಯವಹಾರ ಹಾಗೂ ಆಸ್ತಿಪಾಸ್ತಿಗಳ ರಕ್ಷಣೆಯ ಬಗ್ಗೆಯೂ ಅವರು ಆತಂಕಿತರಾಗಿದ್ದಾರೆ.
ಎಲ್ಲಕ್ಕಿಂತ ಮಿಗಿಲಾಗಿ, ಇರಾನ್‌ನಲ್ಲಿ ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿರುವುದರಿಂದ ಅಲ್ಲಿರುವ ತಮ್ಮ ಮಕ್ಕಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಕ್ಷೇಮ ಸಮಾಚಾರ ತಿಳಿಯದೆ ದಂಪತಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಅತಂತ್ರ ಸ್ಥಿತಿಯಲ್ಲಿರುವ ಈ ದಂಪತಿ, ಯುದ್ಧವು ಆದಷ್ಟು ಬೇಗ ಕೊನೆಗೊಂಡು ಪರಿಸ್ಥಿತಿ ತಿಳಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.