ಗುರುಪುರ: ತುಳುನಾಡಿನ ಸಾಂಸ್ಕೃತಿಕ ಪರಂಪರೆಯು ದೇಶಕ್ಕೆ ಕಲಶಪ್ರಾಯವಾಗಿದ್ದು, ಕರಾವಳಿಯ ಕ್ರೀಡೆ ಕಂಬಳವನ್ನು ಶೀಘ್ರದಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಬಮೂಲ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಘೋಷಿಸಿದರು.



















ಗುರುಪುರ ಮಾಣಿಬೆಟ್ಟು ಗುತ್ತಿನ ಎದುರಿನ ಗದ್ದೆಯಲ್ಲಿ ಶನಿವಾರ ರಾತ್ರಿ ಇನಾಯತ್ ಅಲಿ ನೇತೃತ್ವದಲ್ಲಿ ನಡೆದ 3ನೇ ವರ್ಷದ ‘ಗುರುಪುರ ಕಂಬಳ’ದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಂಬಳವು ಕೇವಲ ಕ್ರೀಡೆಯಲ್ಲ, ಅದೊಂದು ಕಲೆ ಮತ್ತು ಧಾರ್ಮಿಕ ಪದ್ಧತಿಯಾಗಿದೆ ಎಂದು ಬಣ್ಣಿಸಿದ ಅವರು, “ಮುಂದಿನ ದಿನಗಳಲ್ಲಿ ಕಂಬಳವು ಐಪಿಎಲ್ ಮಾದರಿಯಲ್ಲಿ ಅತ್ಯಂತ ವೃತ್ತಿಪರವಾಗಿ ನಡೆಯಬೇಕು. ಆ ಮೂಲಕ ನಮ್ಮ ಗ್ರಾಮೀಣ ಆಚರಣೆಗಳನ್ನು ಜಾಗತಿಕ ಮಟ್ಟದಲ್ಲಿ ಉಳಿಸಿ ಬೆಳೆಸಬೇಕು. ಕರಾವಳಿಯ ಈ ಜಾನಪದ ಸೊಗಡು ರಾಜ್ಯಾದ್ಯಂತ ಪಸರಿಸುವ ಕೆಲಸ ಸದ್ಯದಲ್ಲೇ ಆರಂಭವಾಗಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಂಬಳ ಸಮಿತಿಯ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಡಿ.ಕೆ. ಸುರೇಶ್, “ಇನಾಯತ್ ಅಲಿ ಅವರು ಜ್ಯಾತ್ಯತೀತ ಮನೋಭಾವದ ಸಂಕೇತ. ನಗರೀಕರಣದ ಈ ವೇಗದಲ್ಲಿ ಕೃಷಿಕರ ಜೀವನಾಡಿಯಾದ ಕಂಬಳವನ್ನು ಅವರು ಅಚ್ಚುಕಟ್ಟಾಗಿ ಸಂಘಟಿಸುತ್ತಿದ್ದಾರೆ. ಅವರಿಗೆ ಶಕ್ತಿ ನೀಡುವ ಉದ್ದೇಶದಿಂದಲೇ ನಾನು ಇಲ್ಲಿ ಭಾಗವಹಿಸಿದ್ದೇನೆ,” ಎಂದರು.
ಅಂತಾರಾಷ್ಟ್ರೀಯ ಮಟ್ಟಕ್ಕೆ ಕಂಬಳ: ಯು.ಟಿ. ಖಾದರ್
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮಾತನಾಡಿ, “ವೈವಿಧ್ಯಮಯವಾದ ಈ ಗುರುಪುರ ಕಂಬಳದಲ್ಲಿ ಭಾಗವಹಿಸುವುದು ಸಂತಸದ ಸಂಗತಿ. ಕರಾವಳಿಯ ಜಾನಪದ ಕ್ರೀಡೆಯನ್ನು ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟಿಸಲು ಸಾಧ್ಯವಿದೆ ಎಂಬುದನ್ನು ಇನಾಯತ್ ಅಲಿ ತೋರಿಸಿಕೊಟ್ಟಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಂಡೆಯನ್ನು ಹೊತ್ತ ಬೆಟ್ಟ ಡಿ.ಕೆ. ಸುರೇಶ್!: ಇನಾಯತ್ ಅಲಿ
ಗುರುಪುರ ಕಂಬಳ ಸಮಿತಿಯ ಅಧ್ಯಕ್ಷ ಇನಾಯತ್ ಅಲಿ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, ಕಂಬಳ ಎಂಬುದು ಕೇವಲ ಕ್ರೀಡೆಯಲ್ಲ, ಅದು ತುಳುನಾಡಿನ ಸಾಂಸ್ಕೃತಿಕ ಬೇರು ಮತ್ತು ಕೃಷಿಕರ ಸ್ವಾಭಿಮಾನದ ಪ್ರತೀಕ. ಸರ್ವ ಧರ್ಮಗಳ ಸಂಗಮವಾಗಿರುವ ಗುರುಪುರದಲ್ಲಿ ಇಂತಹ ಅದ್ಧೂರಿ ಕಂಬಳ ನಡೆಯುತ್ತಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯ ಎಂದರು.
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಮುಖ್ಯ ಅತಿಥಿ ಡಿ.ಕೆ. ಸುರೇಶ್ ಅವರನ್ನು ವಿಶೇಷವಾಗಿ ಶ್ಲಾಘಿಸಿದ ಅವರು, “ಕನಕಪುರದ ಬಂಡೆಯಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸಹೋದರ ಡಿ.ಕೆ. ಸುರೇಶ್ ಅವರು ಆ ಬಂಡೆಯನ್ನೇ ಹೊತ್ತು ನಿಂತಿರುವ ಬೆಟ್ಟದಂತಿದ್ದಾರೆ. ಅವರ ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ನಮ್ಮ ಗುರುಪುರ ಕಂಬಳ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಅದ್ಧೂರಿಯಾಗಿ ಮೂಡಿಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
100 ಕುಟುಂಬಗಳಿಗೆ ಸಹಾಯಧನ
ಕಂಬಳದ ವೇದಿಕೆಯು ಈ ಬಾರಿ ಕೇವಲ ಸಂಭ್ರಮಕ್ಕೆ ಸೀಮಿತವಾಗದೆ ಮಾನವೀಯತೆಯ ಮೌಲ್ಯವನ್ನೂ ಎತ್ತಿ ಹಿಡಿಯಿತು. 100 ಆರ್ಥಿಕ ಅಶಕ್ತ ಕುಟುಂಬಗಳ ಮದುವೆ ಸಹಾಯಾರ್ಥವಾಗಿ ತಲಾ 25 ಸಾವಿರ ರೂ. ಗಳಂತೆ ಒಟ್ಟು ದೊಡ್ಡ ಮೊತ್ತದ ಸಹಾಯಧನವನ್ನು ವಿತರಿಸಲಾಯಿತು. ಅತಿಥಿಗಳಾಗಿ ಆಗಮಿಸಿದ್ದ ಡಿ.ಕೆ. ಸುರೇಶ್ ಮತ್ತು ಯು.ಟಿ. ಖಾದರ್ ಅವರಿಗೆ ಚಿನ್ನದ ನೊಗ ಮತ್ತು ಬೆಳ್ಳಿಯ ಬಾರುಕೋಲು ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಮಾಜಿ ಸಚಿವ ಅಭಯಚಂದ್ರ ಜೈನ್, ಕರ್ನಾಟಕ ಪರಿಸರ ಅಭಿವೃದ್ಧಿಮಂಡಳಿಯ ಅಧಗಯಕ್ಷೆ ಶಾಲೆಟ್ ಪಿಂಟೊ, ರಾಜ್ಯ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಶಿವರಾಮ ಶೆಟ್ಟಿ ತಲ್ಲೂರು, ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಜಗದೀಶ್ ಅಧಿಕಾರಿ, ಕೀರ್ತಿ ಗಣೇಶ್, ಬಿ.ಎಲ್. ಪದ್ಮನಾಭ, ಆರ್. ಕೆ. ಪೃಥ್ವಿರಾಜ್, ಜಗದೀಶ್ ಶೆಟ್ಟಿ, ಮೋಹನ್ ಕೋಟ್ಯಾನ್ ಮುಲ್ಕಿ, ರಿಯಾಝ್ ಸುಲ್ತಾನ್ ಗೋಲ್ಡ್ , ಮುನಿಯಾಲು ಉದಯಕುಮಾರ್ ಶೆಟ್ಟಿ, ಪವರ್ ಟಿವಿಯ ರಾಕೇಶ್ ಶೆಟ್ಟಿ, ಕಂಬಳ ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್ ಪೆಲತ್ತಡಿ, ಪ್ರಧಾನ ಕಾರ್ಯದರ್ಶಿ ಯಶವಂತ್ ಕುಮಾರ್ ಶೆಟ್ಟಿ ಬೆಳ್ಳೂರು ಗುತ್ತು, ಸ್ಥಾಪಕಾಧ್ಯಕ್ಷ ರಾಜ್ ಕುಮಾರ್ ಶೆಟಗಟಿ ತಿರುವೈಲು ಗುತ್ತು, ಕಾರ್ಯಾಧ್ಯಕ್ಷ ಜಗದೀಶ ಶೆಟ್ಟಿ ಮಾಣಿಬೆಟ್ಟುಗುತ್ತು, ವ್ಯವಸ್ಥಾಪಕರಾದ ವಿನಯಕುಮಾರ್ ಶೆಟ್ಟಿ ಮಾಣಿಬೆಟ್ಟುಗುತ್ತು, ಪ್ರಧಾನ ಸಚಾಲಕರಾದ ಸುರೇಂದ್ರಕಂಬಳಿ, ಜಯಶೀಲ ಅಡ್ಯಂತಾಯ, ಗಿರೀಶ್ ಆಳ್ವ, ಪದ್ಮನಾಭ ಶೆಟ್ಟಿ ದೋಣಿಂಜೆಗುತ್ತು, ಕೋಶಾಧಿಕಾರಿ ಹರೀಶ್ ಭಂಡಾರಿ, ಜೊತೆ ಕಾರ್ಯದರ್ಶಿಗಳಾದ ಬಾಲಕೃಷ್ಣ ಪೂಜಾರಿ ಬರಿಪಟ್ಲ, ಪುರುಶೋತ್ತಮ ಮಲ್ಲಿ ದೋಣಿಂಜೆಗುತ್ತು ಮೊದಲಾದವರು ಉಪಸ್ಥಿತರಿದ್ದರು.