ಶಿರಸಿ (ಉತ್ತರ ಕನ್ನಡ): ಕೊಟ್ಟ ಹಣವನ್ನು ಮರಳಿ ಕೇಳಿದ್ದಕ್ಕೆ ಮಹಿಳೆಯರ ಮೇಲೆ ಗ್ಯಾಂಗ್‌ವೊಂದು ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಶಿರಸಿಯ ನೆಹರು ನಗರದಲ್ಲಿ ನಡೆದಿದೆ. ಯಲ್ಲಾಪುರ ಮೂಲದ ಆಯಿಷಾ ಮತ್ತು ಗೀತಾ ಎಂಬುವವರು ಹಲ್ಲೆಗೊಳಗಾದ ದುರ್ದೈವಿಗಳು. ಈ ಕುರಿತು ಮೊಹಮ್ಮದ್ ಸಲ್ಮಾನ್ ಮತ್ತು ಆತನ ತಂಡದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

ಘಟನೆಯ ಹಿನ್ನೆಲೆ: ಸಂತ್ರಸ್ತೆ ಆಯಿಷಾ ಅವರು ಆರೋಪಿ ಮೊಹಮ್ಮದ್ ಸಲ್ಮಾನ್ ಎಂಬಾತನಿಗೆ ಅಂಗಡಿ ಇಡಲು 3 ಲಕ್ಷದ 80 ಸಾವಿರ ರೂಪಾಯಿ ಹಣವನ್ನು ನೀಡಿದ್ದರು. ಈ ನಡುವೆ ಆಯಿಷಾ ಅವರ ಪತಿ ಮೃತಪಟ್ಟ ಕಾರಣ ಅವರು ಕೆಲವು ದಿನಗಳ ಕಾಲ ಊರಿಗೆ ತೆರಳಿದ್ದರು. ಎರಡು ತಿಂಗಳ ನಂತರ ವಾಪಸ್ ಬಂದಾಗ, ಆರೋಪಿ ಸಲ್ಮಾನ್ ಯಲ್ಲಾಪುರ ಬಿಟ್ಟು ಶಿರಸಿಯಲ್ಲಿ ಕೆಲಸ ಮಾಡುತ್ತಿರುವುದು ತಿಳಿದುಬಂದಿದೆ.

ಆಯಿಷಾ ಅವರು ತನ್ನ ಸ್ನೇಹಿತೆ ಗೀತಾ ಅವರೊಂದಿಗೆ ಶಿರಸಿಗೆ ತೆರಳಿ ಸಲ್ಮಾನ್‌ನ ಸಹೋದರನ ಬಳಿ ಹಣದ ವಿಚಾರ ಪ್ರಸ್ತಾಪಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಏಕಾಏಕಿ ಸ್ಥಳಕ್ಕೆ ಬಂದ ನಾಲ್ಕೈದು ಜನರ ಗ್ಯಾಂಗ್ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಿಗ್ಗಾಮುಗ್ಗ ಥಳಿಸಿದೆ ಎನ್ನಲಾಗಿದೆ.

ದಾಳಿ ನಡೆಸಿದ ಗ್ಯಾಂಗ್ ಮಹಿಳೆಯರ ಮೇಲೆ ಅಮಾನವೀಯವಾಗಿ ವರ್ತಿಸಿದ್ದು, ಅವರ ಖಾಸಗಿ ಭಾಗಗಳ ಮೇಲೆ ದಾಳಿ ನಡೆಸಿದ್ದಾರೆ ಎಂಬ ಆಘಾತಕಾರಿ ಆರೋಪ ಕೇಳಿಬಂದಿದೆ. ಹಲ್ಲೆಯಿಂದ ಸಂತ್ರಸ್ತೆಯರು ತೀವ್ರವಾಗಿ ಗಾಯಗೊಂಡಿದ್ದು, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.