ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ನಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಂಐಎಫ್‌ಎಸ್‌ಇ (Mifse) ಮಿನ್ನರ್ವ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಸಂಯೋಜಿತ ಕೋರ್ಸ್‌ಗಳ ಭವ್ಯ ಉದ್ಘಾಟನಾ ಸಮಾರಂಭವು ಶನಿವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಕಾಲೇಜು ಈಗ ಬೆಳಗಾವಿಯ ವಿ.ಟಿ.ಯು ಅಧಿಕೃತ ಸಂಯೋಜನೆಗೆ ಒಳಪಟ್ಟಿದ್ದು, ಈ ಶೈಕ್ಷಣಿಕ ಮೈಲಿಗಲ್ಲನ್ನು ಗಣ್ಯರ ಸಮ್ಮುಖದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಫರೀದ್ ಅವರು, “ವಿದ್ಯಾರ್ಥಿಗಳು ಕೇವಲ ಪದವಿಗಾಗಿ ಓದದೆ, ಬದುಕಿಗೆ ಆಸರೆಯಾಗುವ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಇಂದು ದೊಡ್ಡ ಇಂಜಿನಿಯರಿಂಗ್ ಪದವಿ ಪಡೆದವರು ಉದ್ಯೋಗವಿಲ್ಲದೆ ಅಲೆಯುತ್ತಿದ್ದಾರೆ, ಆದರೆ ಐಟಿಐ ಅಥವಾ ವೃತ್ತಿಪರ ಶಿಕ್ಷಣ ಪಡೆದವರಿಗೆ ತಕ್ಷಣ ಕೆಲಸ ಸಿಗುತ್ತಿದೆ. ಕಂಪೆನಿಗಳಿಗೆ ಇಂದು ಇಂತಹ ನಿಪುಣ ವಿದ್ಯಾರ್ಥಿಗಳ ಅಗತ್ಯವಿದೆ,” ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಬೆಳವಣಿಗೆಯನ್ನು ಶ್ಲಾಘಿಸಿದ ಸಭಾಪತಿಗಳು, “ವಿನೋದ್ ಕೆ. ಜಾನ್ ಅವರು 19 ವರ್ಷಗಳ ಹಿಂದೆಯೇ ಇಂತಹದೊಂದು ಕಾಲೇಜಿನ ಅಗತ್ಯವನ್ನು ಮನಗಂಡು ದೂರದೃಷ್ಟಿಯಿಂದ ಆರಂಭಿಸಿದ್ದರು. ಇಂದು ಈ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ. ಬಡತನ ಹೋಗಲಾಡಿಸಿ, ವಿದ್ಯಾರ್ಥಿಗಳು ಸ್ವಾಭಿಮಾನದಿಂದ ಬದುಕುವಂತೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ,” ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಭಾಷಾ ಪ್ರೌಢಿಮೆಯ ಬಗ್ಗೆ ಕಿವಿಮಾತು ಹೇಳಿದ ಖಾದರ್ ಅವರು, “ಕೇವಲ ಇಂಗ್ಲಿಷ್ ಒಂದನ್ನೇ ಅವಲಂಬಿಸಬೇಡಿ. ಜೀವನೋಪಾಯಕ್ಕಾಗಿ ಬೇಕಾದ ಎಲ್ಲಾ ಸ್ಥಳೀಯ ಭಾಷೆಗಳನ್ನು ಕಲಿಯಿರಿ. ಭಾಷೆಯ ಮೇಲೆ ಅಸಡ್ಡೆ ಇರಬಾರದು, ಭಾಷಾ ಜ್ಞಾನವಿದ್ದರೆ ಜಗತ್ತಿನ ಯಾವುದೇ ಮೂಲೆಯಲ್ಲೂ ನೀವು ಯಶಸ್ವಿಯಾಗಬಹುದು,” ಎಂದು ತಿಳಿಸಿದರು.
ಕಾರ್ಯಕ್ರಮದ ಗೌರವ ಅತಿಥಿಯಾಗಿ ವಿ.ಟಿ.ಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ಭಾಗವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ, ಕೆ.ಪಿ.ಟಿ ಪ್ರಾಂಶುಪಾಲ ಪ್ರೊ. ಹರೀಶ ಶೆಟ್ಟಿ, ಮತ್ತು ಕೆ.ಎಸ್.ಒ.ಯು ಮೈಸೂರು ಇದರ ಮಾಜಿ ಶೈಕ್ಷಣಿಕ ಡೀನ್ ಪ್ರೊ. ಜಗದೀಶ ಅವರು ಪಾಲ್ಗೊಂಡು ಕಾರ್ಯಕ್ರಮದ ಚಂದವನ್ನು ಹೆಚ್ಚಿಸಿದರು.

ಸಂಸ್ಥೆಯ ಅಧ್ಯಕ್ಷ ವಿನೋದ್ ಕೆ. ಜಾನ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಮನೋಜ್ ಪಿ.ವಿ., ಪ್ರಾಂಶುಪಾಲ ಯಶವಂತ್ ಗೋಪಾಲ್ ಶೆಟ್ಟಿ, ಮತ್ತು ಟ್ರಸ್ಟಿ ಮ್ಯಾಥ್ಯೂ ಕೆ.ವಿ. ಉಪಸ್ಥಿತರಿದ್ದರು. ಇಡೀ ಕಾರ್ಯಕ್ರಮವನ್ನು ಹರ್ಷಿತಾ ನಿರೂಪಿಸಿದರು.
ಮಂಗಳೂರು ಮತ್ತು ಸುತ್ತಮುತ್ತಲ ವಿದ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ ಎನ್.ಎಚ್-75ರಲ್ಲಿರುವ ಮಿನ್ನರ್ವ ಕಾಲೇಜಿನಲ್ಲಿ ಪ್ರಾರಂಭಿಸಲಾಗಿರುವ ಈ ವಿ.ಟಿ.ಯು ಸಂಯೋಜಿತ ಕೋರ್ಸ್‌ಗಳು, ಈ ಭಾಗದ ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲಿವೆ ಎಂದು ಆಡಳಿತ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.