ಕುಂಬಳೆ ರೈಲ್ವೆ ನಿಲ್ದಾಣದಲ್ಲಿ ಕ್ಯಾಂಟೀನ್ ಕ್ಲೋಸ್: ಬಿಸಿ ಬಿಸಿ ಚಹಾಕ್ಕೂ ಪರದಾಟ!

ಕುಂಬಳೆ: ರೈಲ್ವೆ ನಿಲ್ದಾಣದ ನವೀಕರಣದ ಹೆಸರಲ್ಲಿ ಇರುವ ಒಂದು ಕ್ಯಾಂಟೀನ್‌ಗೂ ಬೀಗ ಜಡಿಯಲಾಗಿದೆ. ಇದರಿಂದಾಗಿ ಬೆಳ್ಳಂಬೆಳಗ್ಗೆ ರೈಲು ಏರಲು ಬರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ರೋಗಿಗಳು ಒಂದು ಕಪ್ ಚಹಾ ಅಥವಾ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಕ್ಯಾಂಟೀನ್ ಮುಚ್ಚಿರುವುದು ಸಾರ್ವಜನಿಕರ ಆಕ್ರೋಶಕ್ಕೆ ನಾಂದಿಯಾಗಿದೆ.

ಕೇಂದ್ರ ರೈಲ್ವೆ ಸಚಿವಾಲಯವು ಹಂತ-ಹಂತವಾಗಿ ಕುಂಬಳೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುತ್ತಿದೆ. ಈಗಾಗಲೇ ಪ್ಲಾಟ್‌ಫಾರ್ಮ್‌ಗಳಿಗೆ ಟೈಲ್ಸ್ ಅಳವಡಿಕೆ, ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿಗಳ ನಿರ್ಮಾಣವಾಗಿದೆ. ಈಗ ನಾಲ್ಕನೇ ಹಂತದ ಕಾಮಗಾರಿಯ ಭಾಗವಾಗಿ ಹಳೆಯ ಕ್ಯಾಂಟೀನ್ ಕಟ್ಟಡವನ್ನು ಕೆಡವಿ ಹೊಸತು ಕಟ್ಟಲು ನಿರ್ಧರಿಸಲಾಗಿದೆ. ಆದರೆ, ಹೊಸ ಕಟ್ಟಡವಾಗುವವರೆಗೆ ಪ್ರಯಾಣಿಕರ ಹಸಿವು ನೀಗಿಸಲು ರೈಲ್ವೆ ಇಲಾಖೆ ಯಾವುದೇ ವ್ಯವಸ್ಥೆ ಮಾಡಿಲ್ಲ.

“ಕ್ಯಾಂಟೀನ್ ಸಂಪೂರ್ಣ ಮುಚ್ಚುವ ಬದಲು, ತಾತ್ಕಾಲಿಕವಾಗಿ ಒಂದು ಸಣ್ಣ ತಳ್ಳುಗಾಡಿ ಅಥವಾ ಶೋರೂಂ ಮಾದರಿಯ ವ್ಯವಸ್ಥೆ ಮಾಡಬಹುದಿತ್ತು. ಮುಂಜಾನೆ ಬರುವ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವವರಿಗೆ ಈ ಕ್ಯಾಂಟೀನ್ ದೊಡ್ಡ ಆಸರೆಯಾಗಿತ್ತು. ಈಗ ಕುಡಿಯುವ ನೀರಿಗೂ ಪ್ಲಾಟ್‌ಫಾರ್ಮ್ ಬಿಟ್ಟು ಹೊರಹೋಗಬೇಕಾದ ಪರಿಸ್ಥಿತಿ ಇದೆ” ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.

error: Content is protected !!