ಎಲ್‌ಪಿಜಿ ಗ್ರಾಹಕರಿಗೆ ಆಧಾರ್ ಇ-ಕೆವೈಸಿ ಕಡ್ಡಾಯ: ವಿಳಂಬಿಸಿದರೆ ಬುಕಿಂಗ್‌, ಸಬ್ಸಿಡಿ ಕ್ಯಾನ್ಸಲ್!

ಹೊಸದಿಲ್ಲಿ: ದೇಶಾದ್ಯಂತ ಅಡುಗೆ ಅನಿಲ (LPG) ಪೂರೈಕೆ ವ್ಯವಸ್ಥೆಯನ್ನು ಸುಗಮಗೊಳಿಸಲು ಮತ್ತು ದುರುಪಯೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಇನ್ನು ಮುಂದೆ ಎಲ್ಲಾ ಗೃಹಬಳಕೆಯ ಎಲ್‌ಪಿಜಿ ಗ್ರಾಹಕರು ತಮ್ಮ ಗ್ಯಾಸ್ ಕನೆಕ್ಷನ್‌ಗೆ ಆಧಾರ್ ಆಧಾರಿತ ಇ-ಕೆವೈಸಿ (e-KYC) ಮಾಡಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಗ್ಯಾಸ್ ಸಿಲಿಂಡರ್ ಬುಕಿಂಗ್ ಮತ್ತು ಸಬ್ಸಿಡಿ ಸೌಲಭ್ಯ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

ಇ-ಕೆವೈಸಿ ಏಕೆ ಕಡ್ಡಾಯ?

ಸಬ್ಸಿಡಿ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯುವುದು ಈ ನಿಯಮದ ಮುಖ್ಯ ಉದ್ದೇಶವಾಗಿದೆ. ಒಬ್ಬರೇ ವ್ಯಕ್ತಿ ಬೇರೆ ಬೇರೆ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಗ್ಯಾಸ್ ಸಂಪರ್ಕಗಳನ್ನು ಹೊಂದಿ ಸಬ್ಸಿಡಿ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ನಕಲಿ ಮತ್ತು ಅಕ್ರಮ ಸಂಪರ್ಕಗಳನ್ನು ಪತ್ತೆಹಚ್ಚಲು ಹಾಗೂ ಸಬ್ಸಿಡಿ ಹಣವು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡಲು ಬಯೋಮೆಟ್ರಿಕ್ ಅಥವಾ ಮುಖ ಚಹರೆಯ ದೃಢೀಕರಣದ ಮೂಲಕ ಇ-ಕೆವೈಸಿ ನಡೆಸಲಾಗುತ್ತಿದೆ. ಈ ಮೂಲಕ ಕಪ್ಪು ಮಾರುಕಟ್ಟೆ ಮತ್ತು ಅಕ್ರಮ ದಾಸ್ತಾನುಗಳಿಗೂ ಬ್ರೇಕ್ ಬೀಳಲಿದೆ.

ಮೊಬೈಲ್ ಮೂಲಕವೇ ಕೆವೈಸಿ ಸುಲಭ:

ಗ್ರಾಹಕರು ಇ-ಕೆವೈಸಿ ಮಾಡಿಸಲು ಪದೇ ಪದೇ ಗ್ಯಾಸ್ ಏಜೆನ್ಸಿಗಳಿಗೆ ಅಲೆಯುವ ಅಗತ್ಯವಿಲ್ಲ. ಸ್ಮಾರ್ಟ್‌ಫೋನ್ ಬಳಸುವ ಗ್ರಾಹಕರು ತಮ್ಮ ಮೊಬೈಲ್ ಮೂಲಕವೇ ಈ ಡಿಜಿಟಲ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿರುವ ಬಯೋಮೆಟ್ರಿಕ್ ಅಥವಾ ಫೇಸ್ ಅಥೆಂಟಿಕೇಶನ್ ಬಳಸಿ ಗ್ಯಾಸ್ ಕಂಪನಿಗಳ ಅಧಿಕೃತ ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಸುಲಭವಾಗಿ ಗುರುತಿನ ಚೀಟಿ ದೃಢೀಕರಿಸಬಹುದಾಗಿದೆ.

ಗ್ರಾಹಕರು ಆದಷ್ಟು ಬೇಗ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸರ್ಕಾರ ಸೂಚಿಸಿದೆ. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಗ್ಯಾಸ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಎಚ್ಚರಿಸಲಾಗಿದೆ.

error: Content is protected !!