ಬ್ರಹ್ಮಕುಮಾರೀಸ್‌ನಲ್ಲಿ ಮಹಿಳಾ ದಿನಾಚರಣೆ; ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರಿಗೆ ಗೌರವ

ಮಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬ್ರಹ್ಮಕುಮಾರೀಸ್ ಮಂಗಳೂರಿನ ಉರ್ವಾ ಸ್ಟೋರ್ ಸೇವಾಕೇಂದ್ರ ದಲ್ಲಿ ಮಹಿಳೆಯರ ಆತ್ಮಶಕ್ತಿ, ಮೌಲ್ಯಾಧಾರಿತ ಜೀವನ ಹಾಗೂ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರವನ್ನು ಉತ್ತೇಜಿಸುವ ವಿಶೇಷ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ ಮಹಿಳಾ ಸಾಧಕರನ್ನು ಗೌರವಿಸಲಾಯಿತು. ಮಮತಾ ಗಟ್ಟಿ (ಅಧ್ಯಕ್ಷರು ಹಾಗೂ ನಿರ್ದೇಶಕರು, ಕರ್ನಾಟಕ ಕಾಜು ಅಭಿವೃದ್ಧಿ ನಿಗಮ), ಅಕ್ಷತಾ ಕುಪ್ಪಗಲ್ (ಉಪ ಆಯುಕ್ತರು – ಆದಾಯ ಹಾಗೂ ಮುಖ್ಯ ಹಣಕಾಸು ಅಧಿಕಾರಿ, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್), ನೈನಾಪೈ (ಖ್ಯಾತ ವಕೀಲರು, ಮಂಗಳೂರು ಜಿಲ್ಲಾ ನ್ಯಾಯಾಲಯ) ಹಾಗೂ ಜ್ಯೋತಿ (ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ) ಅವರನ್ನು ಈ ಸಂದರ್ಭದಲ್ಲಿ ಮಹಿಳಾ ಸಾಧಕರಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಮತಾ ಗಟ್ಟಿ ಅವರು ಮಹಿಳೆಯರು ಆತ್ಮವಿಶ್ವಾಸ, ಧೈರ್ಯ ಮತ್ತು ಮೌಲ್ಯಾಧಾರಿತ ಜೀವನವನ್ನು ಅಳವಡಿಸಿಕೊಂಡರೆ ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಬಹುದು ಎಂದು ಹೇಳಿದರು.

ಅತಿಥಿಯಾಗಿ ಭಾಗವಹಿಸಿದ್ದ ಅಕ್ಷತಾ ಕುಪ್ಪಗಲ್ ಮಾತನಾಡಿ, ಮಹಿಳೆಯರು ಆಡಳಿತ ಕ್ಷೇತ್ರದಲ್ಲೂ ಪ್ರಮುಖ ಸ್ಥಾನಗಳನ್ನು ಅಲಂಕರಿಸುತ್ತಿರುವುದು ಸಮಾಜದ ಪ್ರಗತಿಯ ಸಂಕೇತವಾಗಿದೆ ಎಂದು ಹೇಳಿದರು. ಶಿಕ್ಷಣ ಹಾಗೂ ಮೌಲ್ಯಗಳೊಂದಿಗೆ ಮಹಿಳೆಯರು ಮುಂದೆ ಬಂದರೆ ರಾಷ್ಟ್ರದ ಅಭಿವೃದ್ಧಿಗೆ ಮಹತ್ವದ ಶಕ್ತಿಯಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ನೈನಾಪೈ ಮಹಿಳೆಯರು ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳ ಅರಿವು ಹೊಂದಿ ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆ ಸ್ಥಾಪಿಸಲು ಮುಂದಾಗಬೇಕು ಎಂದು ಹೇಳಿದರು. ಜ್ಯೋತಿ ಅವರು ಶಿಕ್ಷಣವೇ ಮಹಿಳೆಯರ ಸಬಲೀಕರಣದ ಮೂಲವಾಗಿದ್ದು ವಿದ್ಯಾರ್ಥಿನಿಯರು ತಮ್ಮ ಪ್ರತಿಭೆಯನ್ನು ಬೆಳೆಸಿಕೊಂಡು ಸಮಾಜದಲ್ಲಿ ಮಾದರಿಯಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರತಿಭಾವಂತ ಯುವತಿಯಾದ ವೃಂದಾ ಜಿ. ರಾವ್ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಅವರು ಹಲವಾರು ಕ್ಷೇತ್ರಗಳಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ತೋರಿದ್ದಾರೆ.

ಬ್ರಹ್ಮಕುಮಾರೀಸ್ ಸಂಸ್ಥೆಯ ಪರವಾಗಿ ಬ್ರಹ್ಮಕುಮಾರಿ ವಿಶ್ವೇಶ್ವರಿ ಅವರು ಮಹಿಳೆಯರು ಸಹಜವಾಗಿಯೇ ಶಾಂತಿ, ಪ್ರೀತಿ, ಕರುಣೆ ಮತ್ತು ಸಹನೆಯ ಮೌಲ್ಯಗಳನ್ನು ಹೊಂದಿರುವವರು ಎಂದು ತಿಳಿಸಿದರು. ರಾಜಯೋಗ ಧ್ಯಾನದ ಮೂಲಕ ಈ ಮೌಲ್ಯಗಳನ್ನು ಇನ್ನಷ್ಟು ವೃದ್ಧಿಪಡಿಸಿಕೊಂಡರೆ ಮಹಿಳೆಯರು ಕುಟುಂಬ, ಸಮಾಜ ಮತ್ತು ರಾಷ್ಟ್ರದ ನಿರ್ಮಾಣದಲ್ಲಿ ಶಕ್ತಿಯಾಗಬಹುದು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಬ್ರಹ್ಮಕುಮಾರಿ ವಿಶ್ವೇಶ್ವರಿ ಅವರಿಂದ ರಾಜಯೋಗ ಧ್ಯಾನಾಭ್ಯಾಸವನ್ನು ನಡೆಸಿಕೊಡಲಾಯಿತು. ಧ್ಯಾನದ ಮೂಲಕ ಮನಸ್ಸಿಗೆ ಶಾಂತಿ, ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬಹುದು ಎಂದು ವಿವರಿಸಲಾಯಿತು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಮಹಿಳಾ ಶಕ್ತಿಯ ಮಹತ್ವವನ್ನು ಸ್ಮರಿಸಲಾಯಿತು.

error: Content is protected !!