ಮಂಗಳೂರು: ಇವತ್ತು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸಂಬಂಧ ಹೇಗಿದೆ ಅಂದರೆ, ಅದು ʻಬೆಂಕಿ ಮತ್ತು ಗಾಳಿ’ಯ ಹಾಗೆ. ಬೆಂಕಿ ಹತ್ತಿಕೊಳ್ಳಲು ಗಾಳಿ ಬೇಕು, ಆದರೆ ಅದೇ ಗಾಳಿ ಜೋರಾಗಿ ಬೀಸಿದರೆ ಬೆಂಕಿ ಆರಿಹೋಗುತ್ತದೆ! ಈಗ ಇವರಿಬ್ಬರ ನಡುವೆ ಆಗುತ್ತಿರುವುದು ಕೂಡ ಇದೇ.

ಮಾರ್ಚ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಆ ಬಜೆಟ್ ಪುಸ್ತಕದ ಹಿಂದೆಯೇ ʻಕುರ್ಚಿ’ ಬದಲಾವಣೆಯ ಗುಪ್ತ ಅಜೆಂಡಾ ಅಡಗಿದೆ. ಬಜೆಟ್ ನಂತರ ಸಿದ್ದರಾಮಯ್ಯ ಮಾಜಿಯಾಗಿ ಡಿಕೆಶಿ ಸಿಎಂ ಆಗಿ ಕುರ್ಚಿ ಏರಲು ಮಹೂರ್ತ ಫಿಕ್ಸ್ ಆಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆಯೇ ಸಿದ್ದು-ಪರಂ ನಡುವೆ ಗುಪ್ತಸಮಾಲೋಚನೆ ನಡೆದಿದ್ದು, ಬಜೆಟ್ ನಂತರ ದೊಡ್ಡದೊಂದು ಬೆಳವಣಿಗೆ ನಡೆಯಲಿದೆ ಎನ್ನುವ ಸುದ್ದಿ ಹಬ್ಬುತ್ತಿದೆ.
ಹೈಕಮಾಂಡ್‌ನ ‘ತ್ರಿಶೂಲ’ ವ್ಯೂಹ:
ದೆಹಲಿಯ ಹಿರಿಯ ನಾಯಕರು ಈಗ ಒಂದು ಹೊಸ ತಂತ್ರ ಹೂಡಿದ್ದಾರೆ. ಸಿದ್ದರಾಮಯ್ಯ ಅವರಿಗೆ “ಗೌರವಯುತ ನಿರ್ಗಮನ” (Graceful Exit) ನೀಡಲು ಸಿದ್ಧತೆ ನಡೆಸುತ್ತಿದ್ದಾರೆ. ಇಷ್ಟು ವರ್ಷ ಚೆನ್ನಾಗಿ ಆಡಳಿತ ಮಾಡಿದ್ರಿ… ಇನ್ನೇನಿದ್ದರೂ ಡಿಕೆಶಿಗೂ ಒಂದು ಛಾನ್ಸ್ ಕೊಡೋಣ, ಒಂದು ವೇಳೆ ನೀವು ಕೆಳಗಿಳಿದರೆ, ನಿಮ್ಮ ಆಪ್ತರನ್ನೇ ಕೆಪಿಸಿಸಿ ಉತ್ತರಾಧಿಕಾರಿಯನ್ನಾಗಿ ಮಾಡೋಣ ಎಂಬ ಆಮಿಷವನ್ನೂ ಒಡ್ಡಲಾಗಿದೆ ಎನ್ನಲಾಗುತ್ತಿದೆ.
ಡಿ.ಕೆ. ಶಿವಕುಮಾರ್ ಈ ಬಾರಿ ಅಬ್ಬರಿಸುತ್ತಿಲ್ಲ, ಬದಲಾಗಿ ʻಸೈಲೆಂಟ್’ ಆಗಿದ್ದಾರೆ. ರಾಜಕಾರಣದಲ್ಲಿ ಒಬ್ಬ ನಾಯಕ ಸೈಲೆಂಟ್ ಆಗಿದ್ದಾನೆ ಅಂದರೆ ಅವನು ದೊಡ್ಡ ಮಟ್ಟದ ʻಸ್ಕೆಚ್’ ಹಾಕುತ್ತಿದ್ದಾನೆ ಎಂದೇ ಅರ್ಥ. ಶಾಸಕರನ್ನು ತನ್ನತ್ತ ಸೆಳೆದುಕೊಳ್ಳುವ ಕಲೆ ಡಿಕೆಶಿಗೆ ಚೆನ್ನಾಗಿ ಗೊತ್ತು. “ಈಗ ಬಿಟ್ಟರೆ ಮತ್ಯಾವತ್ತೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ” ಎಂಬ ಸತ್ಯ ಅವರಿಗೆ ಮನವರಿಕೆಯಾಗಿದೆ. ಅದಕ್ಕೇ ದೆಹಲಿಗೆ ಪದೇ ಪದೇ ಹೋಗಿ ತಮ್ಮ ‘ನಿಷ್ಠೆ’ಯನ್ನು ಸಾಬೀತುಪಡಿಸುತ್ತಿದ್ದಾರೆ.
ʻಮೂರನೇ ಕಣ್ಣು’ ಪರಮೇಶ್ವರ್?
ಈ ಇಬ್ಬರ ಜಗಳದ ನಡುವೆ ಸದ್ದಿಲ್ಲದೆ ಅದೃಷ್ಟ ಪರೀಕ್ಷೆಗೆ ಇಳಿದಿರುವುದು ಡಾ. ಜಿ. ಪರಮೇಶ್ವರ್. ಇತ್ತೀಚೆಗೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನಡುವಿನ ಗುಪ್ತ ಸಮಾಲೋಚನೆಗಳು ಹೆಚ್ಚಾಗಿವೆ. ಡಿಕೆಶಿಯವರಿಗೆ ಅಧಿಕಾರ ತಪ್ಪಿಸಲು ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರನ್ನೇ ಮುಂದಿನ ಸಿಎಂ ಎಂದು ಪ್ರೆಸೆಂಟ್ ಮಾಡಿದರೂ ಅಚ್ಚರಿಯಿಲ್ಲ! ಇದು ‘ದಲಿತ ಸಿಎಂ’ ಕಾರ್ಡ್ ಮೂಲಕ ಡಿಕೆಶಿಯವರನ್ನು ಕಟ್ಟಿಹಾಕುವ ತಂತ್ರ.

ಬಜೆಟ್ ತನಕ ಸಿದ್ದು ನಿರಾಳ!
ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಡಿಕೆಶಿ ಪರ ಒಲವು ಹೊಂದಿದ್ದರೂ, ರಾಹುಲ್ ಗಾಂಧಿ ಅವರು ‘ಅಹಿಂದ’ ನಾಯಕ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಿ ಒಬಿಸಿ ಮತಗಳನ್ನ ಕಳೆದುಕೊಳ್ಳಲು ತಯಾರಿಲ್ಲ. ಆದರೆ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಗರಣಗಳ ತನಿಖೆ ಮತ್ತು ಬಣ ಬಡಿದಾಟದಿಂದ ಬೇಸತ್ತಿರುವ ಹೈಕಮಾಂಡ್, “ಬಜೆಟ್ ಮುಗಿಯಲಿ, ಆಮೇಲೆ ನೋಡೋಣ” ಎಂಬ ಗಡುವು ನೀಡಿದೆ ಎನ್ನಲಾಗುತ್ತಿದೆ.

ಬಜೆಟ್ ನಂತರ ಏನಾಗಬಹುದು?
ಹೈಕಮಾಂಡ್‌ನಿಂದ ಕೊನೆಯ ಕರೆ ಬಂದರೆ ಸಿದ್ದರಾಮಯ್ಯ ಅವರು ಬಜೆಟ್ ನಂತರ ಅಥವಾ ಅದಕ್ಕಿಂತ ಮುಂಚೆಯೇ ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಬಹುದು ಒಂದು ವೇಳೆ ಡಿಕೆಶಿಗೆ ಅಧಿಕಾರ ಸಿಗದಿದ್ದರೆ ಅವರ ಬೆಂಬಲಿಗರು ಬೀದಿಗೆ ಇಳಿದು ಬಂಡಾಯದ ಬಾವುಟ ಬೀಸುವುದು ಗ್ಯಾರಂಟಿ. ಈ ಎಲ್ಲ ಗೊಂದಲಗಳ ನಡುವೆ ರಾಜ್ಯಪಾಲರ ನಡೆ ಅತ್ಯಂತ ಕುತೂಹಲಕಾರಿಯಾಗಿದೆ. ಸರ್ಕಾರದ ವಿಸ್ತರಣೆ ಅಥವಾ ವಿಸರ್ಜನೆಗೆ ಅವರು ಸಿದ್ಧರಾಗಿ ಕುಳಿತಿದ್ದಾರೆ!