ಕುಂಬಳೆ: ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆ ಆರಿಕ್ಕಾಡಿ ಟೋಲ್ ಕೊನೆಗೂ ರದ್ದುಗೊಂಡಿದ್ದು, ಟೋಲ್ ವಿರೋಧಿ ಕ್ರಿಯಾ ಸಮಿತಿ ಮತ್ತು ಬಿಜೆಪಿ ಮುಖಂಡರು ಮಂಗಳವಾರ(ಫೆ.3) ಸಂಜೆ ಕುಂಬಳೆಯಲ್ಲಿ ಪ್ರತ್ಯೆಕ ವಿಜಯೋತ್ಸವ ನಡೆಸಿದರು.

ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದು, ಲಿಖಿತ ಆದೇಶಕ್ಕೆ ಸಹಿ ಹಾಕಿದ್ದಾರೆ. ಇಂದು(ಫೆ.4) ಅಧಿಕೃತ ಪ್ರಕಟನೆ ಹೊರಬೀಳಲಿದೆ. ಸಚಿವ ನಿತಿನ್ ಗಡ್ಕರಿ ಅವರು ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈ ವಿಷಯ ತಿಳಿಸಿದ್ದಾರೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್.ಅಶ್ವಿನಿ ತಿಳಿದಿದ್ದಾರೆ.

ಕೇರಳ- ಕರ್ನಾಟಕ ಗಡಿ ಪ್ರದೇಶದಿಂದ ಕೇವಲ 22 ಕಿ.ಮೀ ದೂರದಲ್ಲಿ ಇನ್ನೊಂದು ಟೋಲ್ ಗೆ ಅವಕಾಶ ನೀಡುವುದಿಲ್ಲ. ನ್ಯಾಯಾಲಯದ ತೀರ್ಪು ಹೊರಬರುವ ಮೊದಲು ಟೋಲ್ ಸಂಗ್ರಹಿಸಬಾರದು ಎಂದು ಸಮಿತಿ ಪಟ್ಟು ಹಿಡಿಯಿತು. ಕೇಂದ್ರ ಆಡಳಿತದಲ್ಲಿರುವ ಬಿಜೆಪಿಯ ಜಿಲ್ಲಾ ಸಮಿತಿ ಪ್ರತಿಭಟನೆಯಲ್ಲಿ ನೇರವಾಗಿ ಭಾಗವಹಿಸದೆ, ಆರಿಕ್ಕಾಡಿ ಟೋಲ್ ರದ್ದುಪಡಿಸುವಂತೆ ಕೋರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರಿಗೆ ಮನವಿ ಮೂಲಕ ನಿರಂತರ ಒತ್ತಡ ಹೇರಿತು. ಈ ಬಗ್ಗೆ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಅವರು ಮಂಗಳವಾರ ಸಂಜೆ ದಾಖಲೆ ಬಿಡುಗಡೆ ಮಾಡಿದ್ದಾರೆ.

ಕ್ರಿಯಾ ಸಮಿತಿ ವತಿಯಿಂದ ನಡೆದ ವಿಜಯೋತ್ಸವಕ್ಕೆ ಸಮಿತಿಯ ಅಶ್ರಫ್ ಕಾರ್ಲೆ, ಸಿ.ಎ. ಝುಬೈರ್, ಲಕ್ಷ್ಮಣ ಪ್ರಭು, ಎ.ಕೆ.ಆರೀಫ್, ಆಸಿಫ್ ಕಳತ್ತೂರು ಮುಂತಾದವರು ನೇತೃತ್ವ ನೀಡಿದರು. ಬಿಜೆಪಿಯಿಂದ ನಡೆದ ವಿಜಯೋತ್ಸವದಲ್ಲಿಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಬಿಜೆಪಿ ಕೋಯಿಕ್ಕೋಡ್ ವಲಯ ಉಪಾಧ್ಯಕ್ಷ ವಿಜಯ್ ಕುಮಾರ್ ರೈ, ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಯಾದವ್ ಮುಂತಾದವರು ನೇತೃತ್ವ ವಹಿಸಿದ್ದರು.