ಎಡಿನ್ ಬರೋ: 2026ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ ತನ್ನ ತಂಡವನ್ನು ಪ್ರಕಟಿಸಿದೆ. ಈ ಬಾರಿ ಸ್ಕಾಟ್ಲೆಂಡ್ ಪ್ರವೇಶವನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಈ ಅನಿರೀಕ್ಷಿತ ಅವಕಾಶದೊಂದಿಗೆ, ಸ್ಕಾಟ್ಲೆಂಡ್ ಈಗ ದೊಡ್ಡ ವೇದಿಕೆಯಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಲು ಎದುರುನೋಡುತ್ತಿದೆ.

ರಿಚೀ ಬೆರ್ರಿಂಗ್ಟನ್ ನಾಯಕತ್ವದ ಈ ತಂಡದಲ್ಲಿ ಕಳೆದ ವಿಶ್ವಕಪ್ ಆಡಿದ 11 ಆಟಗಾರರು ಕಾಣಿಸಿಕೊಂಡಿದ್ದಾರೆ. ಅಫ್ಘಾನ್ ಮೂಲದ ವೇಗಿ ಝೈನುಲ್ಲ ಎಹಸಾನ್ ಈ ತಂಡದ ಏಕೈಕ ಹೊಸ ಮುಖವಾಗಿದ್ದು, ಟಾಮ್ ಬ್ರೂಸ್, ಫಿನ್ಲೆ ಮೆಕ್ ಕ್ರೀತ್ ಮತ್ತು ಒಲಿವರ್ ಡೇವಿಡ್ಸನ್ ಮೊದಲ ಸಲ ವಿಶ್ವಕಪ್ ಆಡಲಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ತಂಡದ ಕೋಚ್ ಆಗಿ ನೇಮಕಗೊಂಡ ಓವನ್ ಡಾಕಿನ್ಸ್ ಮೊದಲ ಸಲ ಸ್ಕಾಟ್ಲೆಂಡ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
ಸ್ಕಾಟ್ಲೆಂಡ್ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ವೆಸ್ಟ್ ಇಂಡೀಸ್, ಇಂಗ್ಲೆಂಡ್, ನೇಪಾಲ ಮತ್ತು ಇದೇ ಮೊದಲ ಸಲ ವಿಶ್ವಕಪ್ ಆಡಲಿಳಿದ ಇಟಲಿ ವಿರುದ್ಧ ತನ್ನ ಲೀಗ್ ಪಂದ್ಯಗಳನ್ನು ಆಡಲಿದೆ.

ಸ್ಕಾಟ್ಲೆಂಡ್ ತಂಡ: ರಿಚೀ ಬೆರ್ರಿಂಗ್ಟನ್ (ನಾಯಕ), ಟಾಮ್ ಬ್ರೂಸ್, ಮ್ಯಾಥ್ಯೂ ಕ್ರಾಸ್, ಬ್ರಾಡ್ಲಿ ಕರೀ, ಒಲಿವರ್ ಡೇವಿಡ್ಸನ್, ಕ್ರಿಸ್ ಗ್ರೀವ್ಸ್, ಝೈನುಲ್ಲ ಎಹಸಾನ್, ಮೈಕಲ್ ಜೋನ್ಸ್, ಮೈಕಲ್ ಲೀಸ್ಕ್, ಫಿನ್ಲೆ ಮೆಕ್ ಕ್ರೀತ್, ಬ್ರ್ಯಾಂಡನ್ ಮೆಕ್ ಮುಲೆನ್, ಜಾರ್ಜ್ ಮುನ್ಸಿ, ಸಫಿಯಾನ್ ಶರೀಫ್, ಮಾರ್ಕ್ ವ್ಯಾಟ್, ಬ್ರಾಡ್ಲಿ ವೀಲ್.