ದೀಪಕ್ ಆತ್ಮಹತ್ಯೆ ಪ್ರಕರಣ: ಶಿಮ್ಜಿತಾ ಮುಸ್ತಫಾ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಪೊಲೀಸರ ವರದಿಯಲ್ಲಿ ಏನಿದೆ?

ಕೋಝಿಕೋಡ್: ಲೈಂಗಿಕ ಕಿರುಕುಳ ಆರೋಪದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿದ ಬಳಿಕ ಗೋವಿಂದಪುರಂ ನಿವಾಸಿ ದೀಪಕ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ, ಪೊಲೀಸರು ಸಲ್ಲಿಸಿದ ರಿಮಾಂಡ್ ವರದಿಯಲ್ಲಿ ಆರೋಪಿ ಶಿಮ್ಜಿತಾ ಮುಸ್ತಫಾ ಮಾಡಿದ ಎಲ್ಲಾ ಆರೋಪಗಳನ್ನು ತಳ್ಳಿಹಾಕಲಾಗಿದೆ.

ಶಿಮ್ಜಿತಾ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ವೀಡಿಯೊಗಳಿಂದ ತೀವ್ರ ಮಾನಸಿಕ ಅವಮಾನಕ್ಕೆ ಒಳಗಾದ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಿಮಾಂಡ್ ವರದಿ ತಿಳಿಸಿದೆ.

Sex Harassment Or Follower Farming? Kerala Suicide Ignites Massive Debate

ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಶಿಮ್ಜಿತಾ ದೀಪಕ್ ಅವರ ಹಲವು ವೀಡಿಯೊಗಳನ್ನು ಚಿತ್ರೀಕರಿಸಿ, ಅವುಗಳನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ತನಿಖೆಯ ಪ್ರಕಾರ, ಆರೋಪಿಸಲಾದ ಪ್ರಯಾಣದ ಸಮಯದಲ್ಲಿ ಬಸ್‌ನಲ್ಲಿ ಯಾವುದೇ ಅಸಹಜ ಅಥವಾ ಆಕ್ಷೇಪಾರ್ಹ ಘಟನೆ ನಡೆದಿಲ್ಲ. ದೀಪಕ್ ಮತ್ತು ಶಿಮ್ಜಿತಾ ಪ್ರಯಾಣಿಸುತ್ತಿದ್ದ ಅಲ್ ಅಮೀನ್ ಬಸ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ವಿವರವಾಗಿ ಪರಿಶೀಲಿಸಿದಾಗ, ಯಾವುದೇ ಅನುಚಿತ ವರ್ತನೆ ಕಂಡುಬಂದಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಬಸ್ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರ ಹೇಳಿಕೆಗಳೂ ಕಿರುಕುಳದ ಆರೋಪಗಳಿಗೆ ವಿರುದ್ಧವಾಗಿವೆ.

ಇಬ್ಬರೂ ಬಸ್ಸಿನಿಂದ ಇಳಿಯುವಾಗ ಸಹಜವಾಗಿಯೇ ಕಾಣಿಸಿಕೊಂಡಿದ್ದು, ಯಾವುದೇ ಗೊಂದಲ ಅಥವಾ ತೊಂದರೆಯ ಲಕ್ಷಣಗಳು ಕಂಡುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿತ ಘಟನೆಗೆ ಸಂಬಂಧಿಸಿ ಶಿಮ್ಜಿತಾ ಅವರು ವಡಕರ, ಪಯ್ಯನ್ನೂರು ಅಥವಾ ಬೇರೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಎಂಬುದನ್ನೂ ರಿಮಾಂಡ್ ವರದಿ ಉಲ್ಲೇಖಿಸಿದೆ.

ಶಿಮ್ಜಿತಾ ದೀಪಕ್ ಅವರನ್ನು ಒಳಗೊಂಡ ಕನಿಷ್ಠ ಏಳು ವೀಡಿಯೊಗಳನ್ನು ಚಿತ್ರೀಕರಿಸಿದ್ದು, ಅವುಗಳಲ್ಲಿ ಕೆಲವನ್ನು ನಂತರ ಅಳಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಅಳಿಸಲಾದ ವೀಡಿಯೊಗಳು ಹಾಗೂ ಸಾಮಾಜಿಕ ಮಾಧ್ಯಮ ಖಾತೆಗಳ ಮಾಹಿತಿಯನ್ನು ಫೋನ್‌ನ ವಿಧಿವಿಜ್ಞಾನ ವಿಶ್ಲೇಷಣೆಯ ಮೂಲಕ ಮರುಪಡೆಯಲು ಪ್ರಯತ್ನಗಳು ನಡೆಯುತ್ತಿವೆ. ದೀಪಕ್ ಅವರನ್ನು ಸಾರ್ವಜನಿಕವಾಗಿ ಅವಮಾನಿಸುವ ಉದ್ದೇಶದಿಂದಲೇ ವೀಡಿಯೊಗಳನ್ನು ರೆಕಾರ್ಡ್ ಮಾಡಿ ಹಂಚಲಾಗಿದೆ ಎಂದು ವರದಿ ಆರೋಪಿಸಿದೆ.

ಶಿಮ್ಜಿತಾ ಮುಸ್ತಫಾ ಅವರ ಜಾಮೀನು ಅರ್ಜಿಯನ್ನು ಶನಿವಾರ ಕುನ್ನಮಂಗಲಂ ನ್ಯಾಯಾಲಯ ಪರಿಗಣಿಸಲಿದ್ದು, ಹೆಚ್ಚಿನ ತನಿಖೆಗೆ ಅನುಕೂಲವಾಗುವಂತೆ ಅವರನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

error: Content is protected !!