ಉಡುಪಿ: ಹೂವುಗಳಿಂದ ಅಲಂಕರಿಸಲಾದ ಕಟ್ಟಡ, ಬಣ್ಣದ ರಂಗೋಲಿ, ನಗುನಗುತ್ತ ಅತಿಥಿಗಳನ್ನು ಬರಮಾಡಿಕೊಂಡ ಅಧಿಕಾರಿಗಳು—ಉಡುಪಿಯ ನಿಟ್ಟೂರಿನ ರಾಜ್ಯ ಮಹಿಳಾ ನಿಲಯ ಶುಕ್ರವಾರ ಅಪರೂಪದ ಸಂತಸದ ಸಮಾರಂಭಕ್ಕೆ ಸಾಕ್ಷಿಯಾಯಿತು. ನಿಲಯದ ನಿವಾಸಿಗಳಾದ ಸುಶೀಲಾ ಮತ್ತು ಮಲ್ಲೇಶ್ವರಿ ಅವರ ವಿವಾಹ ಸಮಾರಂಭಗಳು ಸಾಂಪ್ರದಾಯಿಕವಾಗಿ ನೆರವೇರಿದವು.

ಸುಶೀಲಾ ಅವರ ವಿವಾಹ ಹಾಸನ ಜಿಲ್ಲೆಯ ಹೊಳೆನರಸೀಪುರದ ನಾಗರಾಜ್ ಅವರೊಂದಿಗೆ, ಮಲ್ಲೇಶ್ವರಿ ಅವರ ವಿವಾಹ, ದಕ್ಷಿಣ ಕನ್ನಡದ ಮೂಲ್ಕಿ–ಬಪ್ಪನಾಡಿನ ಸಂಜಯ್ ಪ್ರಭು ಅವರೊಂದಿಗೆ ಜರುಗಿತು.
ಅಧಿಕಾರಿಗಳ ಆಶೀರ್ವಾದ
ವಿವಾಹದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ವಧುಗಳಿಗೆ ಧಾರೆ ಎರೆಯುವ ಗೌರವ ವಹಿಸಿದರು. ಡಿವೈಎಸ್‌ಪಿ ಪ್ರಭು ಡಿ.ಟಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನಿ ಮತ್ತಿತರರು ಹಿರಿಯರ ಸ್ಥಾನದಲ್ಲಿ ನಿಂತು ವರ–ವಧುಗಳನ್ನು ಆಶೀರ್ವದಿಸಿದರು.
ವಧು–ವರರ ಪರಿಚಯ
ಮಲ್ಲೇಶ್ವರಿ: ಮೂಲತಃ ಬಳ್ಳಾರಿಯವರು, 18 ವರ್ಷ ಪೂರ್ಣಗೊಂಡ ಬಳಿಕ ಕಾರವಾರ ಬಾಲಮಂದಿರದಿಂದ ಉಡುಪಿಗೆ ಬಂದರು. ಪ್ರಸ್ತುತ ತೃತೀಯ ಬಿ.ಎ. ಓದುತ್ತಿದ್ದಾರೆ.
ಸಂಜಯ್ ಪ್ರಭು: ಎಂ.ಕಾಂ. ಪದವಿ ಮುಗಿಸಿ, ಬೆಂಗಳೂರಿನ IBM ಕಂಪನಿಯಲ್ಲಿ ಕೆಲಸ.
ಸುಶೀಲಾ: ಮಹಿಳಾ ನಿಲಯದ ಹುಣಸೆ ಹಣ್ಣು ಸಂಸ್ಕರಣಾ ಘಟಕದಲ್ಲಿ ಉದ್ಯೋಗ.
ನಾಗರಾಜ್: ಬೆಂಗಳೂರಿನಲ್ಲಿ ಮೊಬೈಲ್ ಕ್ಯಾಂಟೀನ್ ನಡೆಸುತ್ತಿದ್ದಾರೆ.
“ಮಹಿಳಾ ನಿಲಯದಲ್ಲಿ ಇದುವರೆಗೆ 25 ಮದುವೆಗಳು ನಡೆದಿದ್ದರೆ, ಇವು 26ನೇ ಮತ್ತು 27ನೇ ವಿವಾಹಗಳು,” ಎಂದು ನಿಲಯದ ಅಧೀಕ್ಷಕಿ ಪುಷ್ಪಾರಾಣಿ ತಿಳಿಸಿದರು . “ನಿವಾಸಿಗಳಿಗೆ ಶಿಕ್ಷಣ, ಉದ್ಯೋಗ ತರಬೇತಿ, ಕೌಶಲಾಭಿವೃದ್ಧಿ, ಕುಟುಂಬ ಪುನರ್ವಸತಿ ಎಲ್ಲವೂ ಸರ್ಕಾರದ ಆಶ್ರಯದಲ್ಲಿ. ಸೂಕ್ತ ವರ ಸಿಕ್ಕರೆ ಅವರ ಇಚ್ಛೆಯಂತೆ ವಿವಾಹ ವ್ಯವಸ್ಥೆ ಮಾಡಲಾಗುತ್ತದೆ. ಪ್ರೋತ್ಸಾಹಧನವಾಗಿ ₹50,000 ವಧುವಿನ ಹೆಸರಿನಲ್ಲಿ ಠೇವಣಿ ಮಾಡಲಾಗುತ್ತದೆ,” ಎಂದರು.
ಪ್ರಸ್ತುತ ನಿಲಯದಲ್ಲಿ 51 ಮಹಿಳೆಯರು ಮತ್ತು 2 ಮಕ್ಕಳು ಆಶ್ರಯ ಪಡೆದಿದ್ದು, ಅವರಲ್ಲಿ 4 ಮಂದಿ ಕಾಲೇಜು ವಿದ್ಯಾರ್ಥಿನಿಯರು ಎಂದು ಅವರು ಮಾಹಿತಿ ನೀಡಿದರು.