ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಹಾಗೂ ರಾಣಿ ಅಬ್ಬಕ್ಕ ಚಾವಡಿ ಸಹಭಾಗಿತ್ವದಲ್ಲಿ ಡಿಸೆಂಬರ್ 14ರಂದು ಮಂಗಳೂರು ತಾಲ್ಲೂಕಿನ ಗಂಜಿಮಠ ವ್ಯಾಪ್ತಿಯ ಮಳಲಿ(ಮಣೇಲ್)ಯ ದ.ಕ. ಜಿ.ಪಂ.ಹಿ. ಪ್ರಾಥಮಿಕ ಶಾಲೆಯಲ್ಲಿ ‘ಮಣೇಲ್ ದ ಪೆರ್ಮೆ ರಾಣಿ ಅಬ್ಬಕ್ಕ’ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.

ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಉಳ್ಳಾಲ ರಾಣ ಅಬ್ಬಕ್ಕನ ಹುಟ್ಟುರು ಮಣೇಲ್ ಆಗಿದ್ದು, ಇದಕ್ಕೆ ಸಂಬಂಧಪಟ್ಟ ಹಲವು ಐತಿಹಾಸಿಕ ಸಾಕ್ಷಿಗಳಿವೆ. ಮಣೇಲ್ ಗ್ರಾಮದ ಸಂಸ್ಕೃತಿಕ ಮಹತ್ವವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಮಣೇಲ್ ರಾಣಿ ಅಬ್ಬಕ್ಕನ ಅರಮನೆ ಇರುವ ಐತಿಹಾಸಿಕ ಗ್ರಾಮವಾಗಿದ್ದು, ವಿದೇಶಿ ಪ್ರವಾಸಿಗ ಪಿಯಾತ್ರೋ ದಲ್ಲಾವೆಲ್ಲೆ ತನ್ನ ಪ್ರವಾಸಕಥನದಲ್ಲಿ ರಾಣಿ ಅಬ್ಬಕ್ಕನನ್ನು ಇಲ್ಲಿ ಭೇಟಿ ಮಾಡಿದ್ದ ಬಗ್ಗೆ ವಿವರಿಸಿದ್ದಾನೆ. ಇಲ್ಲಿ ಅಬ್ಬಕ್ಕ ಆರಾಧನೆ ಮಾಡುತ್ತಿದ್ದ ಶ್ರೀ ಅನಂತನಾಥ ಸ್ವಾಮಿ ಬಸದಿಯಲ್ಲಿ ನಿತ್ಯ ಪೂಜೆ ನಡೆಯುತ್ತಿದೆ. ಅಬ್ಬಕ್ಕನ ಅರಮನೆ ಇದ್ದ ಪಕ್ಕದಲ್ಲಿಯೇ ಶ್ರೀ ಸೂರ್ಯನಾರಾಯಣ ದೇಗುಲವಿದ್ದ ಬಗ್ಗೆಯೂ ಪಿಯಾತ್ರೋ ದಲ್ಲಾವೆಲ್ಲೆ ಸ್ಪಷ್ಟವಾಗಿ ವಿವರಿಸಿದ್ದು, ಕಾಲಕ್ರಮೇಣ ಅದು ನಾಶವಾಗಿತ್ತು. ಇದನ್ನೀಗ ಊರವರು ಜೀರ್ಣೋದ್ಧಾರ ನಡೆಸುತ್ತಿದ್ದಾರೆ ಎಂದರು.

ಕಾರ್ಯಕ್ರಮಕ್ಕೆ ಮುನ್ನ ಬೆಳಿಗ್ಗೆ 9.30ಕ್ಕೆ ಶ್ರೀ ಅನಂತ ಸ್ವಾಮಿ ಬಸದಿಯಿಂದ ಶಾಲಾ ಆವರಣದವರೆಗೆ ಸಾಂಸ್ಕೃತಿಕ ನಡಿಗೆ ನಡೆಯಲಿದೆ. ವಿಚಾರಗೋಷ್ಠಿಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪಗೌಡ ಉದ್ಘಾಟಿಸುವರು ಎಂದರು.
ಗೋಷ್ಠಿಗಳ ವೈಶಿಷ್ಟ್ಯ
ಮೊದಲ ಗೋಷ್ಠಿಯಲ್ಲಿ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ‘ಅಬ್ಬಕ್ಕ ಚಾರಿತ್ರಿಕ ಅವಲೋಕನ’ ಕುರಿತು ಉಪನ್ಯಾಸ ನೀಡಲಿದ್ದಾರೆ.
ಎರಡನೇ ಗೋಷ್ಠಿಯಲ್ಲಿ ಇತಿಹಾಸ ತಜ್ಞ ಡಾ. ಪುಂಡಿಕಾಯಿ ಗಣಪಯ್ಯ ಭಟ್ ‘ಮಣೇಲಿನಲ್ಲಿ ಪ್ರವಾಸಿ ಕಂಡ ಅಬ್ಬಕ್ಕ’ ವಿಷಯದ ಕುರಿತು ಮಾತನಾಡಲಿದ್ದಾರೆ. ಗೋಷ್ಠಿಯಲ್ಲಿ ಮಂಡಿಸಲ್ಪಡುವ ವಿಚಾರಗಳ ಆಧಾರದ ಮೇಲೆ ಅಬ್ಬಕ್ಕ ರಾಣಿಯ ಚಿತ್ರವನ್ನು ಮಳಲಿ ಶಾಲೆ ಹಾಗೂ ಕಟ್ಟೆಮಾರು ಮನೆಯ ಆವರಣಗೋಡೆಯಲ್ಲಿ ಚಿತ್ರಿಸುವ ಯೋಜನೆಯೂ ಅಕಾಡೆಮಿಯು ಹಮ್ಮಿಕೊಂಡಿದೆ ಎಂದು ತಾರಾನಾಥ ಗಟ್ಟಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಚಿತ್ರ ಕಲಾವಿದ ಗಣೇಶ್ ಸೋಮಯಾಜಿ, ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಎಮ್., ಉಪ ನಿರ್ದೇಶಕ ಶಶಿಧರ್ ಜಿ.ಎಸ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಈಶ್ವರ, ನೋಣಯ್ಯ ಕೋಟ್ಯಾನ್, ಪ್ರಶಾಂತ್ ಕಟ್ಟೆಮಾರ್, ಗುಣಪಾಲ ಮೇಂಡ, ಸೀತಾರಾಮ ಪೂಜಾರಿ, ಉಳಿಪಾಡಿ ಗುತ್ತು ಸುಭಾಷ್ ಚಂದ್ರ ನಾಯ್ಕ, ಉದಯ ಆಳ್ವ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.

ಪಿಯಾತ್ರೋ ದಲ್ಲಾವೆಲ್ಲೆ ಇಟಲಿ ಪ್ರವಾಸಿಯಾಗಿದ್ದ. ಆ ಕಾಲದ ಅತ್ಯಂತ ದೊಡ್ಡ ಸೇನೆಯನ್ನು ಹೊಂದಿದ್ದ ಪೋರ್ಚುಗೀಸರನ್ನು ಉಳ್ಳಾಲ ರಾಣಿ ಸೋಲಿಸಿರುವುದು ಪರ್ಷಿಯಾದವರೆಗೂ ಸುದ್ದಿಯಾಗುತ್ತಿದೆ. ಪರ್ಷಿಯಾದ ರಾಜ ಈ ವಿಷಯವನ್ನು ಪಿಯಾತ್ರೋ ದಲ್ಲಾವೆಲ್ಲೆಗೆ ತಿಳಿಸಿದಾಗ ಆತ ಕುತೂಹಲದಿಂದ ಉಳ್ಳಾಲ ಅಬ್ಬಕ್ಕ ರಾಣಿಯನ್ನು ಅಬ್ಬಕ್ಕನ ಮಣೇಲ್ ಅರಮನೆಯಲ್ಲಿ ಭೇಟಿಯಾಗಿದ್ದನ್ನು ತನ್ನ ಪ್ರವಾಸಿ ಕೃತಿಯಲ್ಲಿ ದಾಖಲಿಸಿದ್ದಾಗಿ ತಾರಾನಾಥ ಗಟ್ಟಿ ಇದೇ ಸಂದರ್ಭ ವಿವರಿಸಿದರು.
ವಿಶ್ರಾಂತ ಪ್ರಾಂಶುಪಾಲ, ಮಣೇಲ್ ಗ್ರಾಮಸ್ಥರಾದ ಅಕ್ಷಯ ಕುಮಾರ್ ಮಳಲಿ ಮಾತನಾಡಿ, ಅಬ್ಬಕ್ಕನಿಗೆ ಸಂಬಂಧಿಸಿದ ಹಲವಾರು ಕುರುಹುಗಳು ಮಣೇಲ್‌ನಲ್ಲಿದೆ. ಅಬ್ಬಕ್ಕ ಭತ್ತದ ಗದ್ದೆಗಳಿಗೆ ನೀರಾವರಿ ಮಾಡುತ್ತಿದ್ದ ಸ್ಥಳ ಫಲ್ಗುಣಿ ನದಿ ದಂಡೆಯ ಬದಿಯಲ್ಲಿದೆ. ಕೆಲವೊಂದು ರಚನೆಗಳು, ಕೆತ್ತನೆಗಳು ಈಗಲೂ ಕಂಡು ಬರುತ್ತಿದೆ ಎಂದರು. ಮಳಲಿಯ ಮೂಲ ಹೆಸರು ಮಣೇಲ್ ಆಗಿದೆ. ಜೇಡಿ ಮಣ್ಣು ಇರುವ ಊರು ಇದಾಗಿದ್ದು, ಕುಂಭಾರರು ಹೆಚ್ಚಾಗಿ ನೆಲೆಸಿ ಮಣ್ಣಿನ ಮಡಿಕೆಗಳನ್ನು ಮಾಡುತ್ತಿದ್ದರು. ಇಲ್ಲಿ ಮಣ್ಣಿನ ಮನೆಗಳನ್ನು ಹೆಚ್ಚಾಗಿ ಕಟ್ಟುತ್ತಿದ್ದರು. ಅಬ್ಬಕ್ಕನ ಅರಮನೆ ಕೂಡಾ ಮಣ್ಣಿನದ್ದಾಗಿತ್ತು. ಪೊಳಲಿಯ ಮೂರ್ತಿಗಳನ್ನು ಮಣ್ಣಿನಿಂದಲೇ ಮಾಡಲಾಗಿದೆ. ಮಣ್ಣ್‌ದ ಇಲ್ಲ್(ಮನೆ) ಇರುವ ಊರು ಕ್ರಮೇಣ ಮಣೇಲ್ ಆಯಿತು ಎಂದು ವಿವರಿಸಿದರು.
ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಅಕಾಡೆಮಿ ಸದಸ್ಯರಾದ ಬೂಬ ಪೂಜಾರಿ ಮಳಲಿ, ಹಾಗೂ ಅಕ್ಷಯ ಆರ್. ಶೆಟ್ಟಿ, ಮಾಜಿ ಎಸ್‌ಡಿಎಂಸಿ ಅಧ್ಯಕ್ಷರು, ವಿದ್ವಾಂಸ, ಮಣೇಲ್ ಗ್ರಾಮಸ್ಥ ಪುರಂದರ ಕುಲಾಲ್ ಉಪಸ್ಥಿತರಿದ್ದರು.
