ಡಿ.ಕೆ.ಶಿ. ಮನೆಯಲ್ಲಿ ಬ್ರೇಕ್‌ಫಾಸ್ಟ್ ಮಾಡಿದ ಸಿದ್ದು!- ನಾಟಿ ಕೋಳಿ ಸಾರು ತಿಂದು ಬಂದೆ ಎಂದ ಸಿಎಂ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಇಡ್ಲಿ, ವಡೆ ಸಾಂಬಾರ್‌ ದೋಸೆ, ಚಟ್ನಿ, ಕೇಸರಿ ಬಾತ್‌ ಸಹಿತ ಶುದ್ಧ ಸಸ್ಯಾಹಾರ ಸೇವಿಸಿ ಬಂದಿದ್ದರು. ಇಂದು ಡಿಸಿಎಂ ಡಿಕೆ ಶಿವಕುಮಾರ್ ಮನೆಯಲ್ಲಿ ಸಿದ್ದರಾಮಯ್ಯ ನಾಟಿ ಕೋಳಿ ಸಹಿತ, ಇಡ್ಲಿ, ವಡೆ ಸಾಂಬಾರ್‌ ಸಹಿತ ಭರ್ಜರಿ ನಾನ್‌ ವೆಜಿಟೇರಿಯನ್‌ ಬ್ರೇಕ್‌ ಫಾಸ್ಟ್‌ ಮಾಡಿ ಬಂದಿದ್ದಾರೆ.

ಡಿಕೆ ಶಿವಕುಮಾರ್‌ ಪ್ಯೂರ್‌ ವೆಜಿಟೇರಿಯನ್‌ ಹಾಗಾಗಿ ನಾನು ಅವರಿಗೆ ಶುದ್ಧಾ ಸಸ್ಯಾಹಾರಿ ಬ್ರೇಕ್‌ ಫಾಸ್ಟ್‌ ಮಾಡಿಸಿದ್ದೆ, ಆದರೆ ನಾನು ಪ್ಯೂರ್‌ ನಾನ್‌ ವೆಜಿಟೇರಿಯನ್.‌ ಊರಿಂದ ನಾಟಿ ಕೋಳಿ ತಂದು ಸಾರು ಮಾಡಿ ಕೊಡಪ್ಪ ಅಂತ ಡಿಕೆಶಿಗೆ ಅಂದಿದ್ದೆ. ಪಾಪ ಅವನು ಪ್ಯೂರ್‌ ವೆಜ್‌ ಆಗಿದ್ದರೂ ನನಗಾಗಿ ನಾಟಿ ಕೋಳಿ ಸಾರು ಮಾಡಿದ್ದಾನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಈ ವೇಳೆ ಡಿಕೆಶಿ ಅವರು ಪೇಲವವಾಗಿ ನಕ್ಕರೂ ಮನಸ್ಸಿನಲ್ಲಿ ಯಾವುದೋ ನೋವು ಕೊರೆಯುತ್ತಿರುವಂತೆ ಕಂಡುಬಂದಿದೆ.

ಡಿಕೆಶಿ ಮನೆಯಲ್ಲಿ ಬ್ರೇಕ್‌ ಫಾಸ್ಟ್‌ ಮಾಡಿ ಬಂದ ಸಿದ್ದು, ಕಪ್ಪು ತಂಪು ಕನ್ನಡಕ ಹಾಕಿ ಗೆಲುವಿನ ಮುಖಭಾವ ಹೊತ್ತು ನಗುನಗುತ್ತಾ ಮೀಡಿಯಾಗಳಿಗೆ ಪೋಸ್‌ ನೀಡಿದರೆ ಡಿಕೆಶಿ ಮುಖದಲ್ಲಿ ಹತಾಶೆಯ ನೋವು ಕಂಡುಬರುತ್ತಿತ್ತು.

ನಿನ್ನೆ ನನ್ನ ಮನೆಯಲ್ಲಿ ಡಿಕೆಶಿ ಮನೆಯಲ್ಲಿ ಬ್ರೇಕ್‌ ಫಾಸ್ಟ್‌ ಮಾಡಿದೆ, ಇಂದು ನನ್ನನ್ನೂ ಊಟಕ್ಕೆ ಕರೆದಿದ್ದರು. ಹಾಗಾಗಿ ಬ್ರೇಕ್‌ ಫಾಸ್ಟ್‌ ಮಾಡಿ ಬಂದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪಾರ್ಟಿ ವಿಚಾರ ಚರ್ಚೆ ಮಾಡಿದ್ದೇವೆ. ಡಿ. 8 ರಂದು ಅಸೆಂಬ್ಲಿ ನಡೆಯಲಿದ್ದು, ಎರಡು ವಾರ ಮುಂದುವರಿಲಿದೆ. ಇದರ ಸ್ಟ್ರೇಟಜಿ ಬಗ್ಗೆ ಚರ್ಚೆ ಮಾಡಿದ್ದು, ಬೆಳಗಾವಿ ಅಧಿವೇಶನದಲ್ಲಿ ಹಲವು ಮಹತ್ವ ಪೂರ್ಣ ವಿಚಾರಗಳು ಚರ್ಚೆ ನಡೆದಿದೆ ಎಂದಿದ್ದಾರೆ.

ವಿಪಕ್ಷಗಳು ಯಾವುದೇ ವಿಚಾರ ಪ್ರಸ್ತಾಪಿಸಿದರೂ ನಾವೂ ಅದಕ್ಕೆ ಸ್ಪಷ್ಟ ಉತ್ತರ ನೀಡಲಿದ್ದೇವೆ. ರಾಜ್ಯದ ಸಮಸ್ಯೆಗಳನ್ನು ಚರ್ಚೆ ಮಾಡಿ ಬಗೆಹರಿಸಬೇಕು. ಮೆಕ್ಕೆಜೋಳ, ಕಬ್ಬು ಹೀಗೆ ರೈತರ ಪರ ಚರ್ಚೆ ನಡೆಯಲಿದ್ದು, ನಮ್ಮದು ರೈತ ಪರ ಸರ್ಕಾರ. ನಾನು ರೈತ ಮುಖಂಡರ ಜೊತೆ ಚರ್ಚೆ ನಡೆಸಿದ್ದೇನೆ. ಅವರ ಪರವಾಗಿ ನಿಲುವಳಿ ಮಂಡಿಸುತ್ತೇವೆ. ವಿಪಕ್ಷಗಳಿಗೆ ಅಗ್ರೆಸ್ಸಿವ್‌ ಆಗಿಯೇ ಉತ್ತರ ಕೊಡುತ್ತೇವೆ ಎಂದರು.

ಸಿಎಂ ಬದಲಾವಣೆ ಕುರಿತು ಮಾತಾಡಿದ ಅವರು, ಇದೆಲ್ಲಾ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ರಾಹುಲ್‌ ಗಾಂಧಿ ಯಾವ ಡಿಸಿಷನ್‌ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧ ಎಂದರಲ್ಲದೆ, ನಾನು ಡಿಕೆಶಿ ಒಗ್ಗಟ್ಟಾಗಿದ್ದೇವೆ. ಕಳೆದ 28 ವರ್ಷಗಳಿಂದಲೂ ಒಟ್ಟಾಗಿದ್ದು, ಈಗಲೂ ಒಟ್ಟಾಗಿದ್ದೇವೆ, ಮುಂದೆಯೂ ಒಟ್ಟಾಗಿರುತ್ತೇವೆ. 2028ರಲ್ಲಿ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದರು.
ನಾಳೆ(ಡಿ.3) ಮಂಗಳೂರಿಗೆ ನಾರಾಯಣಗುರು ಕಾರ್ಯಕ್ರಮಕ್ಕೆ ಬರಲಿದ್ದು, ಅಲ್ಲಿಗೆ ವೇಣುಗೋಪಾಲ್‌ ಕೂಡಾ ಬರಲಿದ್ದಾರೆ ಎಂದಿದ್ದಾರೆಯೇ ಹೊರತು ಅಧಿಕಾರ ಹಸ್ತಾಂತರದ ಕುರಿತು ಯಾವುದೇ ಮಾತಾಡಲಿಲ್ಲ.

 

error: Content is protected !!