ಮಂಗಳೂರು: 2017ರಲ್ಲಿ ಉರ್ವಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣದ ಪ್ರಮುಖ ಆರೋಪಿ ನಿಯಾಜ್ ಅಲಿಯಾಸ್ ನಿಯಾ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನನ್ನು ಮಂಗಳೂರು ಪೊಲೀಸರು ಗುರುವಾರ (ಸೆ. 11) ಬೆಳಗಿನ ಜಾವ ಬೆಂಗಳೂರು ಹುಳಿಮಾವು ಅರಕೆರೆಯಿಂದ ದಸ್ತಗಿರಿ ಮಾಡಿದ್ದಾರೆ.

ನಿಯಾ ವಿರುದ್ಧ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳ ವಿವಿಧ ಠಾಣೆಗಳಲ್ಲಿ ಒಟ್ಟು 13 ಪ್ರಕರಣಗಳು ದಾಖಲಾಗಿದ್ದು, ಹಲವಾರು ನ್ಯಾಯಾಲಯಗಳಿಂದ ವಾರೆಂಟ್ ಹೊರಡಿಸಲಾಗಿತ್ತು. ಆತ ದೀರ್ಘಕಾಲದಿಂದ ಪರಾರಿಯಾಗಿದ್ದರೂ, ವಿಶೇಷ ತಂಡ ಹಿಂಬಾಲಿಸಿದ ಪರಿಣಾಮ ಕೊನೆಗೂ ವಶಕ್ಕೆ ಸಿಕ್ಕಿದ್ದಾನೆ.
ಮಂಗಳೂರಲ್ಲಿ 3 ತಿಂಗಳಲ್ಲಿ 52 ಮಂದಿಯ ಸೆರೆ
ಮಂಗಳೂರು ನಗರ ಕಮೀಷನರೇಟ್ ಘಟಕವು ಕಳೆದ 3 ತಿಂಗಳಲ್ಲಿ, ಕನಿಷ್ಠ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಒಟ್ಟು 52 ಮಂದಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗಿ ಪೊಲೀಸ್ ಕಮೀಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಕೋಮು ಗಲಭೆ ಪ್ರಕರಣಗಳಲ್ಲಿ ಭಾಗಿ ಚಂದ್ರಹಾಸ ಕೇಶವ್ ಶೆಟ್ಟಿಗಾರ್, ಲೀಲಾಧರ್, ಖಾದರ್ ಕುಳಾಯಿ, ಶಾಕೀಬ್, ಮೊಹಮ್ಮದ್ ಹುಸೇನ್ ಹಾಗೂ ರಮೀಜ್ ಸೇರಿ ಒಟ್ಟು ಆರು ಮಂದಿ ಸಿಕ್ಕಿಬಿದ್ದಿದ್ದಾರೆ.
ರೌಡಿ ಶೀಟರ್ ದಾಖಲಾಗಿರುವ ಅದಿತ್ಯ ಕುಮಾರ್, ಭರತ್ ಬಾಲು, ಮೊಹಮ್ಮದ್ ಸುಹೈಬ್, ಮೊಹಮ್ಮದ್ ಮುಸ್ತಾಫ್, ಮೊಹಮ್ಮದ್ ನಜೀಮ್, ಉಮ್ಮರ್ ನವಾಫ್, ಉಮ್ಮರ್ ಫಾರೂಕ್, ಫರಾಜ್ ಹಾಗೂ ಮೊಹಮ್ಮದ್ ನಿಯಾಜ್ ಸೇರಿ 9 ಮಂದಿ ಪೊಲೀಸರ ಸೆರೆ ಸಿಕ್ಕಿಬಿದ್ದಿದ್ದಾರೆ.
ಎನ್‌ಡಿಪಿಎಸ್ ಪ್ರಕರಣಗಳಿಗೆ ಸಂಬಂಧಿಸಿ ಪುಂಪಾ ಕಾಶಿ, ದೀಪಾ ನಾರಾಯಣ, ಮೊಹಮ್ಮದ್ ನಿಹಾಲ್, ಮೊಹಮ್ಮದ್ ಶಫೀಕ್, ಬಾಬರ್ ಪಾಷಾ, ಮೊಹಮ್ಮದ್ ಇಟ್ಬಾಲ್, ಹಾಗೂ ಅಬೂಬಕರ್ ಸೇರಿ ಒಟ್ಟು 7 ಮಂದಿ ಪೊಲೀಸ್ ವಶವಾಗಿದ್ದಾರೆ.
ಕೊಲೆ ಪ್ರಕರಣಕದ ಶಾನವಜ್ ಅಲಿಯಾಸ್ ಶಾನ್, ಕೊಲೆ ಯತ್ನ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಗಣೇಶ್ ಲಕ್ಷ್ಮಣ್ ಸಾಕೇತ್, ಅದಿತ್ಯ ಕುಮಾರ್, ಅಬ್ದುಲ್ ನಾಸೀರ್, ಇಮ್ರಾನ್ ಅಲಿಯಾಸ್ ಇಂಬು, ರಮೀಜ್ ಹಾಗೂ ಮೊಹಮ್ಮದ್ ನಜೀಮ್ ಸೇರಿ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೆಚ್ಚುವರಿ ಪ್ರಕರಣ
ಇದಲ್ಲದೇ, ನ್ಯಾಯಾಲಯಕ್ಕೆ ಹಾಜರಾಗದೆ ದೀರ್ಘಕಾಲದಿಂದ ಪರಾರಿಯಾಗಿದ್ದ ವಿಶಾಲ್ ಕುಮಾರ್, ಮೊಹಮ್ಮದ್ ನಿಹಾಲ್, ಇರ್ಷಾದ್, ಹನೀಫ್ ಕೊಕ್ಕಡ ಸೇರಿ 12 ಮಂದಿಯ ವಿರುದ್ಧ ಬಿಎನ್‌ಎಸ್ ಕಲಂ 208, 209, 269 ಅಡಿ ಹೆಚ್ಚುವರಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಅವರು ಈ ಕಾರ್ಯಾಚರಣೆಯ ವಿವರಗಳನ್ನು ಪ್ರಕಟಿಸಿದ್ದಾರೆ.