ಬೆಂಗಳೂರು: ಶುಚಿತ್ವ ಕಾಯ್ದುಕೊಳ್ಳದ ಹೋಟೆಲ್ ಮಾಲಿಕರಿಗೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ರಮೇಶ್ ಅವರು 25 ಸಾವಿರ ರೂ.ದಂಡ ವಿಧಿಸಿದರು. ಶುಚಿತ್ವ ಕಾಯ್ದು ಕೊಳ್ಳದ ಹೋಟೆಲ್‌ಗಳ ಬಗ್ಗೆ ಗಮನ ಹರಿಸಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
ಬೆಳ್ಳಂದೂರು ವಾರ್ಡ್ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ನಗರ ಪಾಲಿಕೆ ಆಯುಕ್ತರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾಕಶಾಲಾ ಹೋಟೆಲ್‌ನಲ್ಲಿರುವ ಅಡುಗೆ ಕೋಣೆಗೆ ಭೇಟಿ ನೀಡಿ ಶುಚಿತ್ವದ ಪರಿಶೀಲನೆ ನಡೆಸಿದರು. ಶುಚಿತ್ವ ಇಲ್ಲದಿರುವುದನ್ನು ಗಮನಿಸಿ ಹೋಟೆಲ್ ಮಾಲಿಕರಿಗೆ ದಂಡ ವಿಧಿಸಿ ಮತ್ತೆ ಈ ರೀತಿ ಆಗದಂತೆ ಎಚ್ಚರಿಕೆ ನೀಡಿದರು.
ಬೆಳ್ಳಂದೂರಿನ ವಿಪ್ರೋ ಬಳಿಯ ಪಾದಚಾರಿ ಮಾರ್ಗದಲ್ಲಿ ಶಾಶ್ವತವಾಗಿ ಅಳವಡಿಸಿಕೊಂಡಿರುವ ಪೆಟ್ಟಿಗೆ ಅಂಗಡಿಗಳನ್ನು ಗಮನಿಸಿ ಸ್ಥಳದಲ್ಲಿಯೇ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಮತ್ತೆ ಈ ರೀತಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡರೆ ಕ್ರಮ ಜರುಗಿಸುವುದುದಾಗಿ ಎಚ್ಚರಿಕೆ ಕೊಟ್ಟರು. ಆಟೋ ಟಿಪ್ಪರ್ ಮಸ್ಟರಿಂಗ್ ಕೇಂದ್ರಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅ ನಂತರ ಅಪಾರ್ಟ್‌ಮೆಂಟ್‌ಗಳಿಂದ ಸಂಗ್ರಹಿಸುವ ಬಲ್ಕ್ವೇಸ್ಟ್ ಪ್ರಕ್ರಿಯೆಯನ್ನು ಕೂಡ ಪರಿಶೀಲಿಸಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಕೆ.ಆರ್. ಪುರಂ ವ್ಯಾಪ್ತಿ ನೀರುಗಾಲುವೆಗಳಲ್ಲಿ ಹೂಳೆತ್ತುವ, ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದರು. ಪೈ ಲೇಔಟ್‌ನಲ್ಲಿ ರಾಜ ಕಾಲುವೆ ವೀಕ್ಷಿಸಿದರು. ರಾಮ ಮೂರ್ತಿ ನಗರ, ಯರಣ್ಣಪಾಳ್ಯದಲ್ಲಿ ರಾಜಕಾಲುವೆ ಕಾಮಗಾರಿಪರಿಶೀಲಿಸಿದರು.