ಕಾಸರಗೋಡು: ನಿಗೂಢವಾಗಿ ಮೃತಪಟ್ಟಿದ್ದ ದೈವ ಕಲಾವಿದನ ಅಂತ್ಯಕ್ರಿಯೆಗೆ ಬಾರದ ಕಾರಣ ಸಂಶಯಗೊಂಡ ಪೊಲೀಸರು ತನಿಖೆ ನಡೆಸಿದಾಗ ಆತನೇ ಕೊಲೆಗಾರ ಎನ್ನುವುದು ಬಯಲಾಗಿದೆ. ಹೀಗಾಗಿ ಅಸಹಜ ಸಾವು ಪ್ರಕರಣವೀಗ ಕೊಲೆ ಪ್ರಕರಣವಾಗಿ ಬದಲಾಗಿದೆ.
ಕೆಲವು ದಿನಗಳ ಹಿಂದೆ ಕಾಸರಗೋಡಿನ ಅಡೂರು ಚಂದನಕ್ಕಾಡ್ನಲ್ಲಿರುವ ದೈವ ಕಲಾವಿದ, ಸತೀಶ್ (48) ಎಂಬವರ ನಿಗೂಢ ಸಾವನ್ನಪ್ಪಿದ್ದರು. ಇದೀಗ ಇವರನ್ನು ಕೊಲೆ ಮಾಡಿದ ಚಿದಾನಂದ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ.
ಸತೀಶ್ ಕಳೆದ ಮಂಗಳವಾರ ಸಂಜೆ ನೆರೆಮನೆಯ ಬಳಿ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆ ವೇಳೆ ಆಂತರಿಕ ಗಾಯಗಳು ಪತ್ತೆಯಾಗಿತ್ತು. ಕುತ್ತಿಗೆಯ ಎಲುಬು ಮುರಿದಿರುವುದು ಕಂಡುಬಂದಿತ್ತು. ಮೃತದೇಹ ನೋಡಲು ಚಿದಾನಂದ ಬಂದಿರಲಿಲ್ಲ. ಉಳಿದವರು ಕರೆ ಮಾಡಿ ಕರೆದರೂ ಚಿದಾನಂದ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಮೃತದೇಹದ ಅಂತ್ಯಕ್ರಿಯೆಗೂ ಚಿದಾನಂದ ಬಂದಿರಲಿಲ್ಲ.
ಅಂತ್ಯಕ್ರಿಯೆ ಮುಗಿಸಿ ಬರುತ್ತಿದ್ದವರಿಗೆ ಚಿದಾನಂದ ಸಮೀಪದ ಮನೆಯೊಂದರ ವರಾಂಡದಲ್ಲಿ ಬಿದ್ದುಕೊಂಡಿದ್ದ. ಪೊಲೀಸರು ಸಂಶಯದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಸತೀಶ್ನನ್ನು ಕೊಂದಿದ್ದಾಗಿ ಬಾಯ್ಬಿಟ್ಟಿದ್ದಾನೆ
ಸೋಮವಾರ ಮಧ್ಯಾಹ್ನ ಸತೀಶ್ ಹಾಗೂ ಚಿದಾನಂದ ಸಮೀಪದ ಚೋಮಣ್ಣ ನಾಯ್ಕ್ ಮನೆಯೊಂದರಲ್ಲಿ ಒಟ್ಟಿಗೆ ಸೇರಿದ್ದು, ಈ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಈ ಸಂದರ್ಭದಲ್ಲಿ ತಳ್ಳಾಟ ನಡೆದಿದ್ದು, ನೆಲಕ್ಕೆ ಬಿದ್ದ ಸತೀಶ್ ರನ್ನು ಚೋಮಣ್ಣ ನಾಯ್ಕ್ ರ ಮನೆಯ ವರಾಂಡದಲ್ಲಿ ಮಲಗಿಸಿ ಪರಾರಿಯಾಗಿ ಬಾಯ್ಬಿಟ್ಟಿದ್ದಾನೆ.