“ಸ್ಕೂಲ್ ಲೀಡರ್…” ಸರಕಾರಿ ಶಾಲೆ, ಲಾಸ್ಟ್ ಬೆಂಚು, ಪುಂಡ ಸ್ನೇಹಿತರ ಒಂದಷ್ಟು ಬೆಚ್ಚಗಿನ ನೆನಪುಗಳು♥️

©️ಶಶಿ ಬೆಳ್ಳಾಯರು

ನಿನ್ನೆ “ಸ್ಕೂಲ್ ಲೀಡರ್” ಅನ್ನುವ ಮಕ್ಕಳ ಸಿನಿಮಾ ನೋಡ್ಕೊಂಡು ಬಂದೆ. ಸಿನಿಮಾ ಯಾಕೆ ಇಷ್ಟ ಆಯ್ತು ಅಂದ್ರೆ ವಾಸ್ತವಕ್ಕೆ ತೀರಾ ಹತ್ತಿರವಾಗಿತ್ತು. ಅದ್ರಲ್ಲೂ ನನ್ನಂತ ಸರಕಾರಿ ಶಾಲೆ ಮಕ್ಕಳ ಜೀವನದಲ್ಲಿ ಅನುಭವಿಸಿದ್ದ ಎಲ್ಲಾನು ಅಲ್ಲಿದ್ದ ಕಾರಣ ಕೊನೆತನಕ ಅದೊಂದು ಸಿನಿಮಾ ಅಂತ ಅನ್ನಿಸಲೇ ಇಲ್ಲ. ಲಾಸ್ಟ್ ಬೆಂಚು, ಪುಂಡ ಪೋಕರಿ ಸ್ನೇಹಿತರ ಬಳಗ, ಬೆನ್ನು ಹಿಡಿದು ಓದಿಸುತ್ತಿದ್ದ ಶಿಕ್ಷಕ ಶಿಕ್ಷಕಿಯರು, ಶಾಲೆ ಮೈದಾನ, ಚುನಾವಣೆ, ಪಾರ್ಲಿಮೆಂಟು ಇವೆಲ್ಲ ಮತ್ತೆ ನೆನಪಾಗಿ “ವಾವ್ ಎಂತ ಗೋಲ್ಡನ್ ಲೈಫ್” ಅಂತ ಅನ್ಸಿತ್ತು.
ಸರಕಾರಿ ಶಾಲೆ, ಮಕ್ಕಳ ಬದುಕು, ಬಡತನದ ಬೇಗೆಯಲ್ಲಿ ಅರಳುವ ಶಿಕ್ಷಣ, ಕನ್ನಡ ಶಾಲೆಗಳ ಅಳಿವು ಉಳಿವು ಎಲ್ಲವನ್ನು ಸಿನಿಮಾದಲ್ಲಿ ಸತ್ಯೇಂದ್ರ ಪೈ ನಿರ್ಮಾಣದಲ್ಲಿ ಮನ ಮುಟ್ಟುವಂತೆ ತೋರಿಸಲಾಗಿದೆ.
ಸಿನಿಮಾದ ಪ್ಲಸ್ ಪಾಯಿಂಟ್ ಚಿತ್ರದ ಒನ್ ಲೈನ್ ಕಥೆ, ಸಂಭಾಷಣೆ, ಕೆಮರಾ ಕೈಚಳಕ ಮತ್ತು ನಿರ್ದೇಶನದಲ್ಲಿನ ಜಾಣ್ಮೆ. ನಿರ್ದೇಶಕ ರಜಾಕ್ ಪುತ್ತೂರು ಈ ಚಿತ್ರದಲ್ಲಿ ತಮ್ಮ ಹಿಂದಿನ ಎರಡು ಸಿನಿಮಾಗಳಿಗಿಂತ ಜಾಸ್ತಿ ಪಕ್ವಗೊಂಡಿದ್ದಾರೆ. ಸಿನಿಮಾದ ಹಾಡು, ಸಾಹಿತ್ಯ, ಸುಂದರ ತಾಣಗಳನ್ನು ಕಣ್ಣಿಗೆ ಹಬ್ಬವಾಗಿ ತೋರಿಸಿದ್ದಾರೆ.
ಸ್ಕೂಲ್ ಲೀಡರ್ ಸಿನಿಮಾದಲ್ಲಿ ನಟಿಸಿರುವ ಎಲ್ಲಾ ಮಕ್ಕಳು ಎಲ್ಲೂ ನಟಿಸಿದ್ದಾರೆ ಅಂತ ಅನಿಸಲ್ಲ. ಅಷ್ಟೊಂದು ಸಲೀಸಾಗಿ ಸಹಜವಾಗಿ ಸಿನಿಮಾದಲ್ಲಿ ನಟಿಸಿದ್ದಾರೆ. ಶ್ರೀಜಯ್, ದೃಶಾ ಕೊಡಗು, ದೀಕ್ಷಾ ಡಿ.ರೈ, ತಸ್ಮಯ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ರಮೇಶ್ ಭಟ್ ಸಿನಿಮಾದಲ್ಲಿದ್ದಾರೆ. ಮಿಸ್ ಮಾಡ್ಬೇಡಿ ಈ ಸಿನಿಮಾವನ್ನು ನೀವೊಬ್ಬರೇ ನೋಡಬೇಡಿ, ನಿಮ್ಮ ಮನೆಯ ಮಕ್ಕಳ ಜೊತೆಗೆ ವೀಕೆಂಡಲ್ಲಿ ಒಂದಿಷ್ಟು ಹೊತ್ತು ಪುರುಸೊತ್ತು ಮಾಡಿಕೊಂಡು ನೋಡಿ.

error: Content is protected !!