ಪೊಲೀಸ್ ಬೀಟ್ ಹೆಚ್ಚಿಸಲು ಮನವಿ
ಹಳೆಯಂಗಡಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಯರು ತೋಕೂರು ಪರಿಸರದಲ್ಲಿ ತಡರಾತ್ರಿ ಕಳ್ಳರು ಕಳ್ಳತನಕ್ಕೆ ಹೊಂಚು ಹಾಕುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ.
ಎರಡು ದಿನಗಳ ಹಿಂದೆ ತಡರಾತ್ರಿ 2 ಗಂಟೆಯ ಸುಮಾರಿಗೆ ತೋಕೂರು ಬಸ್ ನಿಲ್ದಾಣದ ಬಳಿ ಅಪರಿಚಿತರು ನಿಂತುಕೊಂಡಿದ್ದು ದೂರದಲ್ಲಿ ವಾಹನ ಬರುವುದನ್ನು ಕಂಡು ಕತ್ತಲಲ್ಲಿ ಮರೆಯಾಗಿದ್ದರು ಎನ್ನಲಾಗಿದೆ. ಬೆಳ್ಳಾಯರು ಟಿಎ ಬೋರ್ಡ್ ರಸ್ತೆಯಲ್ಲಿ ರಾತ್ರಿ ಕತ್ತಲು ಆವರಿಸಿದ್ದು ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ನಿನ್ನೆ ತಡರಾತ್ರಿ ಮಳೆ ಬರುತ್ತಿದ್ದ ಸಂದರ್ಭದಲ್ಲಿ ಪರಿಸರದ ಮನೆಯೊಂದರಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಮನೆಯ ಬಾಗಿಲ ಬಳಿ ಎರಡರಿಂದ ಮೂರು ಜನ ಮಾತಾಡಿಕೊಳ್ಳುವುದನ್ನು ಕೇಳಿ ಎಚ್ಚರಗೊಂಡ ಮನೆಮಂದಿ ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಮನೆಯವರ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ.
ಮನೆಯಿಂದ ನೂರು ಮೀ. ದೂರದಲ್ಲಿ ರಸ್ತೆಯಿದ್ದು ಅಲ್ಲಿ ವಾಹನ ನಿಲ್ಲಿಸಿ ಇಲ್ಲವೇ ನಡೆದುಕೊಂಡು ಬಂದಿರಬೇಕೆಂದು ಶಂಕಿಸಲಾಗಿದೆ. ಮಂಗಳೂರು ಮತ್ತು ಗ್ರಾಮಾಂತರ ಭಾಗದಲ್ಲಿ ಕುಖ್ಯಾತ ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಹೆಚ್ಚಿದ್ದು ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಅದರಲ್ಲಿ ಇಬ್ಬರು ಸ್ಥಳ ಮಹಜರು ಸಂದರ್ಭ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪಡುಪಣಂಬೂರು ಬಳಿ ಪೊಲೀಸರು ಗುಂಡು ಹಾರಿಸಿದ್ದ ಘಟನೆ ಇತ್ತೀಚಿಗೆ ನಡೆದಿತ್ತು. ಚಡ್ಡಿ ಗ್ಯಾಂಗ್ ಸದಸ್ಯರು ಮೂಲ್ಕಿ ಬಳಿಯ ಮೊಬೈಲ್ ಅಂಗಡಿಯಲ್ಲಿ ಸಿಮ್ ಪಡೆದಿದ್ದು ಸಿಸಿ ಫುಟೆಜ್ ಆಧಾರದಲ್ಲಿ ಪೊಲೀಸರು ಬಂಧಿಸಿದ್ದರು. ಈಗ ಮತ್ತೆ ಮೂಲ್ಕಿ ಸುತ್ತಮುತ್ತ ಕಳ್ಳರ ಹಾವಳಿ ಹೆಚ್ಚುತ್ತಿದ್ದು ಜನರು ನಿದ್ದೆ ಕಳೆದುಕೊಳ್ಳುವಂತಾಗಿದೆ. ಪೊಲೀಸರು ರಾತ್ರಿ ವೇಳೆ ತೋಕೂರು ಬೆಳ್ಳಾಯರು ಪರಿಸರದಲ್ಲಿ ಗಸ್ತು ಬಿಗಿಗೊಳಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ತೋಕೂರು-ಬೆಳ್ಳಾಯರು ಪರಿಸರದಲ್ಲಿ ವಾಮಾಚಾರ!
ಇಲ್ಲಿನ ತೋಕೂರು ಬಸ್ ನಿಲ್ದಾಣ, ಟಿಎ ಬೋರ್ಡ್ ಪ್ಲೈವುಡ್ ಕಂಪೆನಿ ರಸ್ತೆ, ಕೆರೆಕಾಡು ರಸ್ತೆಯಲ್ಲಿ ಪ್ರತಿನಿತ್ಯ ಎನ್ನುವಂತೆ ವಾಮಾಚಾರ ನಡೆಯುತ್ತಿದೆ. ರಾತ್ರಿಯಾಗುತ್ತಿದ್ದಂತೆ ವಾಮಾಚಾರಿಗಳು ಸಕ್ರಿಯರಾಗುತ್ತಿದ್ದು ಕೋಳಿ ಕಡಿದು ನೂರಾರು ಮೊಟ್ಟೆ ಕುಂಬಳಕಾಯೆ ಒಡೆದು ವಾಮಾಚಾರ ಮಾಡುತ್ತಿದ್ದಾರೆ. ಸ್ಕೂಟರ್, ಬೈಕ್, ಮಾರುತಿ ಆಲ್ಟೊ ಕಾರ್, ರಿಕ್ಷಾಗಳು ತಡರಾತ್ರಿ ಸಂಶಯಾಸ್ಪದವಾಗಿ ಓಡಾಡುತ್ತಿರುವುದು ಸ್ಥಳೀಯರು ಗಮನಿಸಿದ್ದಾರೆ. ಕಳ್ಳತನದಲ್ಲಿ ಇದೇ ತಂಡದ ಪಾತ್ರವಿರಬಹುದು ಎಂದು ಶಂಕಿಸಲಾಗುತ್ತಿದೆ. ಹೊರಗಿನಿಂದ ಬಂದು ಇಲ್ಲಿ ವಾಮಾಚಾರ ಮಾಡುತ್ತಿದ್ದು ಇದರಿಂದ ಸ್ಥಳೀಯರು ರಾತ್ರಿ ವೇಳೆ ಓಡಾಡುವುದಕ್ಕೆ ಭಯ ಪಡುವಂತಾಗಿದೆ. ಅಮಾವಾಸ್ಯೆ, ಹುಣ್ಣಿಮೆ ಇವರ ಹಾವಳಿ ಹೆಚ್ಚಿದ್ದು ಪೊಲೀಸರು ಈ ಬಗ್ಗೆ ಗಮನಿಸಬೇಕಾದ ಅಗತ್ಯವಿದೆ.