ಕಿನ್ನಿಗೋಳಿಯಲ್ಲಿ “ಮುದುಕನ ಮದುವೆ” ನಾಟಕ ಪ್ರದರ್ಶನ
ಕಿನ್ನಿಗೋಳಿ: ಶ್ರೀ ನಂದಿಕೇಶ್ವರ ನಾಟಕ ಸಂಘ ಮಂಗಳೂರು ಇದರ ಸಂಯೋಜನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ದಿ.ಪಿಬಿ ರೈ ಬೆಳ್ಳಾರೆ ಇವರ ಸವಿನೆನಪಿನಲ್ಲಿ ಮುದುಕನ ಮದುವೆ ಎಂಬ ಹಾಸ್ಯ ನಾಟಕ ಪ್ರದರ್ಶನ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಆಶೀರ್ವಚನದ ನುಡಿಗಳನ್ನಾಡಿದ ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಲಕ್ಷ್ಮಿನಾರಾಯಣ ಅಸ್ರಣ್ಣ ಅವರು, “ಇದೊಂದು ವಿಶಿಷ್ಟ ಕಾರ್ಯಕ್ರಮ. ನಂದಿಕೇಶ್ವರ ನಾಟಕ ತಂಡದಲ್ಲಿ ಸಿನಿಮಾ ಕ್ಷೇತ್ರದ ಅನೇಕ ಹಿರಿಯ ಕಲಾವಿದರು ಬಣ್ಣ ಹಚ್ಚಿದ್ದಾರೆ. ಸಾವಿರಾರು ಪ್ರದರ್ಶನ ಕಂಡ ಈ ನಾಟಕಕ್ಕೆ ಇಂದಿಗೂ ಜನರ ಬೆಂಬಲ ಸಿಗುತ್ತಿರುವುದು ನೋಡಿದರೆ ಖುಷಿಯಾಗುತ್ತದೆ. ಮುಂದೆಯೂ ಈ ತಂಡದ ಮೂಲಕ ಇನ್ನಷ್ಟು ನಾಟಕ ಪ್ರದರ್ಶನಗಳು ನಡೆಯಲಿ” ಎಂದರು.
ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, “ನಾಟಕಗಳಿಗೆ ಮತ್ತು ಕಲಾವಿದರಿಗೆ ಜನರ ಪ್ರೋತ್ಸಾಹ ಬೇಕು. ಕಳೆದ 40 ವರ್ಷಗಳಿಂದ ಶ್ರೀ ನಂದಿಕೇಶ್ವರ ನಾಟಕ ಸಂಘ ಜನರನ್ನು ರಂಜಿಸುವ ಮೂಲಕ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ಅವರಿಗೆ ಶುಭವಾಗಲಿ“ ಎಂದರು.
ವೇದಿಕೆಯಲ್ಲಿ ಯುಗಪುರುಷ ಪತ್ರಿಕೆ ಸಂಪಾದಕ ಭುವನಾಭಿರಾಮ ಉಡುಪ, ನಟ ಸುಂದರ ರೈ ಮಂದಾರ, ರಾಜ್ ಸಂಪಾಜೆ, ಸಾಯಿನಾಥ್ ಮಾಸ್ಟರ್, ಶಿಲ್ಪಾ ಗೊಂಬೆ ಬಳಗದ ರಮೇಶ್ ಕಲ್ಲಡ್ಕ, ನಾಗರಾಜ್ ಆಚಾರ್ಯ, ತುಳುವೆ ಪ್ರಕಾಶ್, ವಿಕ್ರಂ ಜಾದೂಗಾರ್, ಉದ್ಯಮಿ ಗಣೇಶ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕಲಾವಿದ ರಾಜ್ ಸಂಪಾಜೆ, ಭುವನಾಭಿರಾಮ ಉಡುಪ, ದೀಪಕ್ ರೈ ಪಾಣಾಜೆ ಅವರನ್ನು ಅತಿಥಿಗಳು ಸನ್ಮಾನಿಸಿದರು.
ಪತ್ರಕರ್ತ ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು. ಸಾಯಿನಾಥ್ ಪ್ರಾಸ್ತಾವಿಕ ಮಾತಾಡಿದರು.