📝-ಶಶಿ ಬೆಳ್ಳಾಯರು
ತುಡರ್… ಕನ್ನಡ ಭಾಷೆಯಲ್ಲಿ ಬೆಳಕು ಅಂತ ಅರ್ಥ. ಇತ್ತೀಚಿಗೆ ತೆರೆಗೆ ಬಂದ ಸಾಲು ಸಾಲು ಸಿನಿಮಾಗಳು ಕೋಸ್ಟಲ್ ವುಡ್ ನಲ್ಲಿ ಮುಗ್ಗರಿಸಿರೋವಾಗ ತುಡರ್ ನಿಜಕ್ಕೂ ತುಳು ಚಿತ್ರ ನಿರ್ಮಾಪಕರಿಗೆ, ಪ್ರೇಕ್ಷಕರಿಗೆ ಬೆಳಕಾಗಿದೆ. ತುಳು ಸಿನಿಮಾಗಳಲ್ಲಿ ಹೊಸತನವಿಲ್ಲ, ಹೀರೋ, ಕಥೆ, ನಟ, ನಟಿಯರು, ಹಾಸ್ಯ ಕಲಾವಿದರು ಎಲ್ರು ಒಂದೇ ರೀತಿ ಅಭಿನಯಿಸ್ತಾರೆ. ಯಾವ ಸಿನಿಮಾ ನೋಡಿದ್ರೂ ಅದೇ ಕುಡಿತ, ಬಾರ್ ದೃಶ್ಯಗಳು, ಹಳೇ ಡೈಲಾಗ್ ಗಳು, ವಾಟ್ಸ್ ಅಪ್ ನಲ್ಲಿ ಬಂದ ಹಾಸ್ಯ ಸನ್ನಿವೇಶಗಳು, ತುಳು ಚಿತ್ರರಂಗ ಬದಲಾವಣೆ ಕಾಣೋದು ಯಾವಾಗ ಅನ್ನೋ ಪ್ರಶ್ನೆಗೆ ತುಡರ್ ಚಿತ್ರ ಉತ್ತರದಂತಿದೆ.
ತುಡರ್ ನಲ್ಲಿ ನಗಿಸೋದಕ್ಕೆ ಅರವಿಂದ್ ಬೋಳಾರ್ ಇದ್ದಾರೆ. ಕಥೆ ಚೆನ್ನಾಗಿದ್ರೆ ನಗಿಸೋದಕ್ಕೆ ಒಬ್ಬ ಕಲಾವಿದ ಸಾಕು ಅನ್ನೋದಕ್ಕೆ ಈ ಸಿನಿಮಾ ಸಾಕ್ಷಿ. ಇನ್ನು ಸಿನಿಮಾದ ಪ್ಲಸ್ ಪಾಯಿಂಟ್ ರಂಗಭೂಮಿ ಕಲಾವಿದೆ ರೂಪ ವರ್ಕಾಡಿ ಅವರ ಪಾತ್ರ. ಪ್ರಮುಖ ಪಾತ್ರ ನಿಭಾಯಿಸಿರುವ ರೂಪ ಅಭಿನಯ ಸಖತ್ ಇಷ್ಟ ಆಗುತ್ತೆ. ಇನ್ನು ಕಿರುತೆರೆ ಕಲಾವಿದೆ ಅನ್ವಿತಾ ಸಾಗರ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
“ರೆಪ್ಪೆ ಮುಚ್ಚಂದೆ ತೂಯೆನಾ”, “ಅಕ್ಕಾಸೊಡಿತ್ತಿ ಸೂರ್ಯಗ್” ಹಾಡು ಸಿನಿಮಾ ಮುಗಿದ ಮೇಲೂ ಗುನುಗುನಿಸುವಂತೆ ಮಾಡುತ್ತೆ.
ಚಿತ್ರದಲ್ಲಿ ಬರೀ ಹಾಸ್ಯಕಷ್ಟೇ ಪ್ರಾಧಾನ್ಯತೆ ನೀಡದೆ ಸಸ್ಪೆನ್ಸ್ ಥ್ರಿಲ್ಲರ್ ಕಥಾವಸ್ತುವನ್ನು ನಿರ್ದೇಶಕರು ಡಿಫರೆಂಟ್ ಆಗಿ ತೆರೆಯ ಮೇಲೆ ತೋರಿಸಿದ್ದಾರೆ.
ನಾಯಕ ನಟ ಸಿದ್ಧಾರ್ಥ್ ಶೆಟ್ಟಿ, ದೀಕ್ಷಾ ಭಿಷೇ ನಟನೆ ಫ್ರೆಶ್ ಆಗಿದೆ. ಹಿರಿಯ ಕಲಾವಿದ ಸದಾಶಿವ ಅಮೀನ್, ನಮಿತಾ ಕೂಳೂರು, ಪ್ರಜ್ವಲ್ ಶೆಟ್ಟಿ, ಅಶೋಕ್ ಕುಮಾರ್ ಉದಯ ಪೂಜಾರಿ, ರಾಧೇಶ್, ಎಲ್ಟನ್ ಮಸ್ಕರೇನ್ಹಸ್ , ಶ್ರೀಮತಿ ಜಯಶೀಲ, ಉಮೇಶ್ ಮಿಜಾರ್ ನೆನಪಲ್ಲಿ ಉಳಿಯುತ್ತಾರೆ.
ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ “ತುಡರ್” ತುಳು ಸಿನಿಮಾ ಇದೇ ಜೂನ್ 14 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ವಿಲ್ಸನ್ ರೆಬೆಲ್ಲೊ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತೇಜೇಶ್ ಪೂಜಾರಿ, ಎಲ್ಟನ್ ಮಸ್ಕರೇನಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರಕ್ಕೆ ಮೋಹನ್ ರಾಜ್ ಕಥೆ, ಚಿತ್ರ ಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಟಿಸಿದ್ದಾರೆ ಕೂಡಾ.
ತುಳುವರ ಒಂದೊಳ್ಳೆ ಪ್ರಯತ್ನ ತುಡರ್. ಮುಂದಿನ ದಿನಗಳಲ್ಲಿ ತುಳುವರ ಮನೆಮಾತಾಗೋದು ಪಕ್ಕಾ. ಮುಂದಿನ ವೀಕೆಂಡ್ ನಲ್ಲಿ ಫ್ರೀ ಮಾಡ್ಕೊಂಡು ಕುಟುಂಬ ಸಮೇತ ಸಿನಿಮಾ ನೋಡಿ ಎಂಜಾಯ್ ಮಾಡಿ.