“ನಾವು ನಮ್ಮಲ್ಲಿನ ಒಳ್ಳೆಯ ಗುಣಗಳನ್ನು ಹುಡುಕುತ್ತಿರಬೇಕು” -ಜಗದ್ಗುರು ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ

ಸುರತ್ಕಲ್: “ವೈಷಿಷ್ಠ್ಯಪೂರ್ಣವಾದ ಆಚರಣೆ ನಮ್ಮ ತುಳುನಾಡಿನದ್ದು. ಶಿಬರೂರಿನ ಶಿಖರ ಅಂದರೆ ಕೊಡಮಣಿತ್ತಾಯ ದೈವದ ಸನ್ನಿಧಿ. ಕೆಲವರಿಗೆ ಭಗವಂತ ನಮ್ಮನ್ನು ನೋಡುತ್ತಾನೆ ಎಂಬ ಭಯ ಇರುತ್ತದೆ, ಕೆಲವರಲ್ಲಿ ಭರವಸೆ ಇರುತ್ತದೆ. ತಪ್ಪು ಕೆಲಸ ಮಾಡಿದವನಿಗೆ ಮಾತ್ರ ಭಯ ಇರೋದು ಆದ್ದರಿಂದ ನಾವು ಭರವಸೆ ಹೊಂದಿದವಾರಾಗಿರಬೇಕು. ಹುಡುಕುವುದಾದರೆ ನಮ್ಮಲ್ಲಿನ ಒಳ್ಳೆಯ ಗುಣಗಳನ್ನು ಹುಡುಕೋಣ. ಕೆಟ್ಟ ಗುಣ ಹುಡುಕಲು ಬೇರೆಯವರು ಇರುತ್ತಾರೆ. ಆನೆ ಹೋಗುತ್ತಿದ್ದರೆ ಶ್ವಾನ ಬೊಗಳುವುದು ಸಹಜ. ನಾವು ನಿಲ್ಲುವುದು ಬೇಡ ಸತ್ಯದ ಹಾದಿಯಲ್ಲಿ ಮುಂದಕ್ಕೆ ಚಲಿಸುತ್ತ ಇರೋಣ” ಎಂದು ಆನೆಗುಂದಿ ಮಹಾಸಂಸ್ಥಾನದ ಜಗದ್ಗುರು ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.

ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕುಂಭಾಭಿಷೇಕ ನಾಗಮಂಡಲ ಹಿನ್ನೆಲೆಯಲ್ಲಿ ಗುರುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಬಳಿಕ ಮಾತಾಡಿದ ಆಧ್ಯಾತ್ಮಿಕ ಗುರು ಆನಂದ ಗುರೂಜಿ ಅವರು, “ತುಳುನಾಡಿನ ಕಾರಣಿಕ ಕ್ಷೇತ್ರವಾದ ಶಿಬರೂರಿಗೆ ಭಕ್ತರನ್ನು ಸೆಳೆಯುವ ಶಕ್ತಿಯಿದೆ. ಇಲ್ಲಿನ ಕೊಡಮಣಿತ್ತಾಯ ದೈವಕ್ಕೆ ಭಕ್ತರ ನೋವು ಕಷ್ಟ ಪರಿಹರಿಸುವ ಶಕ್ತಿಯಿದೆ. ದಾನ ಧರ್ಮ ಮಾಡುವ ವಿಶೇಷ ಗುಣ ಇಲ್ಲಿನ ಜನರಲ್ಲಿದೆ. ಅನ್ನದಾನ ಶ್ರೇಷ್ಠವಾದ ದಾನ. ಅದಕ್ಕೆ ಬೇಕಾದ ವಸ್ತುಗಳನ್ನು ದಾನ ಮಾಡುವುದು ಪುಣ್ಯದ ಕೆಲಸ” ಎಂದರು.

ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ವೇದಮೂರ್ತಿ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ, “ಕೊಡಮಣಿತ್ತಾಯ ಅಂದರೆ ತುಂಬಿದ ಕೊಡದಲ್ಲಿ ಸಂಪತ್ತನ್ನು ಎತ್ತಿ ಹಿಡಿದ ದೈವ. ಸಂಪತ್ತು ಅಂದರೆ ಕೇವಲ ಹಣವಲ್ಲ, ಜನರ ಭಕ್ತಿ ಭಾವ, ಸತ್ಯ ತುಂಬಿರುವ ಸಂಪತ್ತು. ಅದು ಶಿಬರೂರಿನಲ್ಲಿ ಕಾಣಸಿಗುತ್ತದೆ. ಇಂತಹ ಶ್ರದ್ಧಾಕೇಂದ್ರ ಬೇರೆಲ್ಲೂ ಕಾಣಸಿಗದು” ಎಂದರು.

ಶ್ರೀ ಕ್ಷೇತ್ರ ಕರಿಂಜೆ ಮುಕ್ತಾನಂದ ಸ್ವಾಮೀಜಿ ಅವರು ಮಾತಾಡುತ್ತಾ “ತಿಬಾರ್ದ ತೀರ್ಥ ಮತ್ತು ಮಣ್ಣಿಗೆ ಹೆಚ್ಚಿನ ಮಹತ್ವವಿದೆ. ವಿಷವನ್ನು ಪರಿಹರಿಸುವ ಕಾರಣಿಕ ಇದ್ದರೆ ಅದು ಶ್ರೀ ಕ್ಷೇತ್ರದಲ್ಲಿ ಮಾತ್ರ ಸಾಧ್ಯ. ಇಲ್ಲಿನ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ನಾವು ನಮ್ಮೊಳಗಿನ ಸ್ವಾರ್ಥ, ಮದ, ಮತ್ಸರ, ಅಸೂಯೆ ಎನ್ನುವ ವಿಷವನ್ನು ಕಳೆದುಕೊಂಡು ಸಾತ್ವಿಕರಾಗೋಣ” ಎಂದು ಹೇಳಿದರು.

ಉಪನ್ಯಾಸ ನೀಡಿದ ಕ್ಯಾಫ್ಸ್ ಫೌಂಡೇಶನ್ ಸಂಸ್ಥಾಪಕ ಸಿಎಫ್ ಸಿಎ ಚಂದ್ರಶೇಖರ ಶೆಟ್ಟಿ ಅವರು, ‘ನಾವು ನಮ್ಮನ್ನು ನಂಬಬೇಕು, ನಮ್ಮಲ್ಲಿ ಭಯ ಇರಬಾರದು, ಅಳುಕು ಇರಬಾರದು. ಯುವಜನತೆ ಯಾವುದನ್ನೂ ತಮ್ಮಿಂದ ಆಗುವುದಿಲ್ಲ ಎಂದುಕೊಳ್ಳಬಾರದು. ಆಗಿಯೇ ಆಗುತ್ತದೆ ಎಂಬ ಛಲ ಇದ್ದರೆ ನಾವು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ನಾವು ನಮ್ಮ ಫೌಂಡೇಶನ್ ಮೂಲಕ ಏಕಬಳಕೆ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲು ಕಾರ್ಯಕ್ರಮ ನಡೆಸುತ್ತ ಬಂದಿದ್ದೇವೆ. ಪ್ಲಾಸ್ಟಿಕ್ ಭೂಮಿಗೆ ಎಸೆಯಬೇಡಿ ಇದರಿಂದ ಪ್ರಾಣಿಗಳು ಸಾಯುತ್ತವೆ. ನಾವು ಪಾಪಕರ್ಮ ಎಸಗಿದಂತಾಗುತ್ತದೆ” ಎಂದರು.

ವೇದಿಕೆಯಲ್ಲಿ ಶ್ರೀ ಕ್ಷೇತ್ರ ಪೊಳಲಿಯ ಆನುವಂಶಿಕ ಮೊತ್ತೇಸರ ಅಡಿಗಳು ಮಾಧವ ಭಟ್ಟ, ಶ್ರೀ ಕ್ಷೇತ್ರ ಶಿಬರೂರು ಇದರ ಮೊತ್ತೇಸರ ಕಾಂತಪ್ಪ ಸಾಲಿಯಾನ್, ಕ್ಯಾಫ್ಸ್ ಫೌಂಡೇಷನ್ ಸಂಸ್ಥಾಪಕ ಸಿಎಫ್ ಸಿಎ ಚಂದ್ರಶೇಖರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೋಂಜಾಲುಗುತ್ತು, ಉದ್ಯಮಿ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು, ಉದ್ಯಮಿ ದಿವಾಕರ ಎಸ್. ಶೆಟ್ಟಿ ಕೋಂಜಾಲಗುತ್ತು, ಉದ್ಯಮಿ ಭಾಸ್ಕರ ಶೆಟ್ಟಿ ಕುಡ್ತಿಮಾರುಗುತ್ತು, ಉದ್ಯಮಿ ಕಿಶೋರ್ ಎಂ. ಶೆಟ್ಟಿ ಶಿಬರೂರುಗುತ್ತು, ಕೃಷ್ಣ ಡಿ. ಶೆಟ್ಟಿ, ಸೂರ್ಯಕುಮಾರ್, ಸಿ.ಎ. ಉದಯಕುಮಾರ್ ಶೆಟ್ಟಿ, ಅಶೋಕ್ ಶೆಟ್ಟಿ, ಡಾ| ಮಂಜಯ್ಯ ಶೆಟ್ಟಿ, ರಾಮಣ್ಣ ಶೆಟ್ಟಿ, ಪೃಥ್ವಿರಾಜ್ ಆಚಾರ್ಯ, ಸಿಎ ಸುದೇಶ್ ಕುಮಾರ್, ಅಶೋಕ್ ಶೆಟ್ಟಿ, ಹರೀಶ್ ಕೇಶವ ಶೆಟ್ಟಿ, ಯದುನಾರಾಯಣ ಶೆಟ್ಟಿ, ಗೀತಾ ಎಸ್‌. ಶೆಟ್ಟಿ ಶಿಬರೂರು, ಸಮಿತಿಯ ಕಾರ್ಯಾಧ್ಯಕ್ಷ ಪ್ರದ್ಯುಮ್ನ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಸುದರ್ಶನ್ ಎಸ್.ವಿ. ಪ್ರಾರ್ಥಿಸಿದರು. ಗಿರೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಶಿವಾನಂದ ಶೆಟ್ಟಿ ಪಡುಮನೆ ಧನ್ಯವಾದ ಸಮರ್ಪಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!