ಮಂಗಳೂರು: ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ ಆಶ್ರಯದಲ್ಲಿ ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಗೌರವಾಧ್ಯಕ್ಷತೆಯಲ್ಲಿ ಪ್ರಥಮ ವರ್ಷದ ಹೊನಲು ಬೆಳಕಿನ ಗುರುಪುರ ಕಂಬಳ ಶುಕ್ರವಾರ ಬೆಳಗ್ಗೆ ಆರಂಭಗೊಂಡಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದ ಕಂಬಳ ಸಮಿತಿ ಕಾರ್ಯದರ್ಶಿ ಗುಣಪಾಲ ಕಡಂಬ ಅವರು, “ಸರ್ವ ಜಾತಿ ಧರ್ಮದ ಜನರನ್ನು ಬೆಸೆಯುವ ಏಕೈಕ ಕ್ರೀಡೆಯೆಂದಿದ್ದರೆ ಅದು ಕಂಬಳ ಮಾತ್ರ. ಗುರುಪುರ ಕಂಬಳದ ಮೂಲಕ ಸಾಮರಸ್ಯ ಬೆಸೆಯುವ ಕೆಲಸ ನಡೆದಿದೆ. ಮುಂದೆಯೂ ಈ ಕಂಬಳ ಇನ್ನಷ್ಟು ವಿಜೃಂಭಣೆಯಿಂದ ನಡೆಯಲಿ. ಜನರನ್ನು ಪರಸ್ಪರ ಬೆಸೆಯುವ ಕೆಲಸ ಇಲ್ಲಿಂದ ಶುರುವಾಗಲಿ” ಎಂದು ಶುಭ ಹಾರೈಸಿದರು.
ಬಳಿಕ ಮಾತಾಡಿದ ಇನಾಯತ್ ಅಲಿ ಅವರು, “ಗುರುಪುರದಲ್ಲಿ ಮೊದಲನೇ ವರ್ಷದ ಕಂಬಳ ಜರುಗುತ್ತಿದ್ದು ಊರಿನ ಜನರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ. ಕಂಬಳದಿಂದ ಶಾಂತಿ ಸೌಹಾರ್ದತೆ ನೆಲೆಗೊಳ್ಳಲಿ” ಎಂದರು.
ವೇದಿಕೆಯಲ್ಲಿ ಕಟೀಲು ದೇವಳದ ಅನುವಂಶಿಕ ಅರ್ಚಕರು ಅನಂತ ಅಸ್ರಣ್ಣ, ಗುರುಪುರ ಪೊಂಪೈ ಚರ್ಚ್ ಧರ್ಮಗುರು ರೊಡಾಲ್ಫ್ ರವಿ ಡೇಸಾ, ದಾರುಸ್ಸಲಾಮ್ ಜುಮಾ ಮಸೀದಿ ಗುರುಪುರ ಜಮಾಲ್ ದಾರಿಮಿ, ರವಿಕುಮಾರ್ ಶೆಟ್ಟಿ ತಿರುವೈಲ್ ಗುತ್ತು, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಜಿಟಿ ವಾಸುದೇವ ಭಟ್, ಸುರೇಂದ್ರ ಕಂಬಳಿ ಅಡ್ಯಾರ್ ಗುತ್ತು, ಪದ್ಮನಾಭ ಕೋಟ್ಯಾನ್, ಯಶವಂತ ಕುಮಾರ್ ಶೆಟ್ಟಿ ಬೊಳ್ಳೂರು ಗುತ್ತು, ರಾಜೇಶ್ ಕುಮಾರ್ ಶೆಟ್ಟಿ, ಜಗದೀಶ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.