ಬಜ್ಪೆ: ಬಜ್ಪೆ ಲೆಜೆಂಡ್ಸ್ ವತಿಯಿಂದ ನ.17ರಿಂದ ನ.19ರ ವರೆಗೆ ರಾತ್ರಿಹಗಲು ನಡೆಯಲಿರುವ ಬಜ್ಪೆ ಪ್ರೀಮೀಯರ್ ಲೀಗ್ ಪ್ರಯುಕ್ತ ಮಾದಕ ವಸ್ತು ನಿರ್ಮೂಲನೆ ಜಾಥಾ ಕಾರ್ಯಕ್ರಮ ಬಜ್ಪೆ ಚರ್ಚ್ ಮುಂಭಾಗದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಜ್ಪೆ ಜುಮಾ ಮಸೀದಿಯ ಖತೀಬ್ ಮನ್ಸೂರ್ ಸಅದಿ ಅವರು, ಮಾದಕ ದ್ರವ್ಯದಿಂದ ಸಮಾಜ ಹಾಳಾಗುತ್ತಿದೆ. ಯುವಜನತೆ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಇದರಿಂದಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಲ್ತ ಪಡಿಸಿದರು. ಮಾದಕ ವಸ್ತುಗಳ ಸೇವನೆ, ಸಾಗಾಟವನ್ನು ಜಾತಿ ಧರ್ಮಗಳನ್ನು ಬದಿಗಿಟ್ಟು ಎಲ್ಲರೂ ಶ್ರಮಿಸಬೇಕು. ಮಾದಕ ವಸ್ತುವಿನ ಕುರಿತು ಎಳವೆಯಲ್ಲಿಯೇ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ನುಡಿದರು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಡ್ರಗ್ಸ್ ಜಾಲವನ್ನು ಮಟ್ಟಹಾಕುವುದು ಸುಲಭದ ಕೆಲಸವಲ್ಲ. ಇಂದು ನಾವು ನಮ್ಮ ಯುವಕರನ್ನು, ಮಕ್ಕಳನ್ನು ಮಾದಕ ವಸ್ತು ಮುಕ್ತರಾಗಿಸಿದರೆ ಮಾತ್ರ ಮುಮದಿನ ದಿನಗಳಲ್ಲಿ ಸುಂದರ ಭಾರತ ನಿರ್ಮಾಣ ಸಾಧ್ಯ ಎಂದು ನುಡಿದರು.
ವೇದಿಕೆಯಲ್ಲಿ ಬಜ್ಪೆ ಚರ್ಚ್ ಧರ್ಮಗುರು ಡಾ. ರೋನಾಲ್ಡ್ ಕುಟಿನ್ಹೋ, ಸ್ಟಾನಿ, ರಿತೇಶ್ ಶೆಟ್ಟಿ, ಕೃಷ್ಣ ಕಲ್ಲೋಡಿ, ಬಿ.ಎಂ. ಷರೀಫ್, ಬಜ್ಪೆ ಲೆಜೆಂಡ್ಸ್ ಅಧ್ಯಕ್ಷ ಮುಹಮ್ಮದ್ ಶಾಫಿ, ಪ್ರಧಾನ ಕಾರ್ಯದರ್ಶಿ ವಿ.ಪಿ. ಆಸೀಫ್, ಮುಹಮ್ಮದ್ ಸಾಲಿಹ್ ಮರವೂರು, ಅಶ್ರಫ್ ಬಜ್ಪೆ, ಅಲ್ತಾಫ್ ಬೆಂಗಳೂರು, ಹಕೀಮ್ ಬಜ್ಪೆ, ಶಾಹುಲ್ ಹಮೀದ್ ಬಜ್ಪೆ, ಝುಬೈರ್ ಬಜ್ಪೆ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಮಾದಕ ವಸ್ತು ನಿರ್ಮೂಲನೆ ಜಾಥಾವು ಬಜ್ಪೆ ಚರ್ಚ್ ನಿಂದ ಬಜ್ಪೆ ಚೆಕ್ ಪೋಸ್ಟ್ ಬಳಿಯ ಬಜ್ಪೆ ಪ್ರೀಮಿಯರ್ ಲೀಗ್ ನ ಕ್ರೀಡಾಂಗಣದ ವರೆಗೆ ನಡೆಯಿತು. ಜಾಥಾದಲ್ಲಿ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಭಾಗವಹಿಸಿದರು.