ಕಿನ್ನಿಗೋಳಿ: ಅಕ್ರಮವಾಗಿ ಬ್ಲಾಸ್ಟ್ ಮೇಲೆ ಬ್ಲಾಸ್ಟ್ ನಡೆಸುವ ಪರಿಣಾಮ ಮನೆಗಳು ಬಿರುಕುಬಿಟ್ಟಿವೆ, ರಸ್ತೆಯ ಡಾಂಬರು ಇದ್ದುಹೋಗಿದೆ, ಗಣಿಗಾರಿಕೆಯ ಯಾವೊಂದು ನಿಯಮಗಳು ಕೂಡ ಪಾಲನೆ ಮಾಡದ ಇಲ್ಲಿ ಸ್ಥಳೀಯರ ವಿರೋಧದ ಮಧ್ಯೆ ಅಧಿಕಾರಿಗಳ ಸಹಕಾರದಿಂದ ನಿರಾತಂಕವಾಗಿ ಕಪ್ಪು ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದು ಕಿನ್ನಿಗೋಳಿ ಬಳಿಯ ನೆಲ್ಲಿಗುಡ್ಡೆ ಎಂಬಲ್ಲಿನ ಸದ್ಯದ ಸ್ಥಿತಿ. ದಿನಕ್ಕೆ 30-40 ಲೋಡ್ ಗಳಷ್ಟು ಕಪ್ಪು ಕಲ್ಲು ಇಲ್ಲಿಂದ ಬೇರೆಡೆಗೆ ಹೋಗುತ್ತಿದ್ದು ಪೊಲೀಸ್ ಇಲಾಖೆಯಿಂದ ಹಿಡಿದು ಗಣಿ ಇಲಾಖೆಯ ಅಧಿಕಾರಿಗಳವರೆಗೆ ಎಲ್ಲರ ಕೃಪೆಯಿಂದ ದಂಧೆ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ನೆಲ್ಲಿಗುಡ್ಡೆ ಜನವಸತಿ ಪ್ರದೇಶಕ್ಕೆ ತೀರಾ ಸಮೀಪದಲ್ಲಿ ಐದಾರು ಕಡೆ ಕಪ್ಪು ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸುರತ್ಕಲ್, ನೆಲ್ಲಿಗುಡ್ಡೆ ಮೂಲದ ಪ್ರಭಾವಿ ವ್ಯಕ್ತಿಗಳು ಇಲ್ಲಿನ ಕೋರೆಯನ್ನು ನಡೆಸುತ್ತಿದ್ದು ಈಗಾಗಲೇ ಪರಿಸರದ ಹತ್ತಾರು ಮನೆಗಳು ಬ್ಲಾಸ್ಟ್ ತೀವ್ರತೆಗೆ ಬಿರುಕು ಬಿಟ್ಟಿವೆ. ಹತ್ತಾರು ಮಂದಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಮಧ್ಯಾಹ್ನದ ಹೊತ್ತು ಏಕಾಏಕಿ ಬ್ಲಾಸ್ಟ್ ನಡೆಸುವ ಕಾರಣ ಜನರು ಭಯಂಕರ ಸದ್ದಿಗೆ ಬೆಚ್ಚಿ ಬೀಳುತ್ತಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಜನವಸತಿ ಪ್ರದೇಶದಲ್ಲಿನ ಅಕ್ರಮ ಕೋರೆ ಬಂದ್ ಮಾಡಿಸಲು ಗ್ರಾಮಸ್ಥರೇ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ನಿಂದ ಹಿಡಿದು ಎಲ್ಲರೂ “ವಸೂಲಿ”ಗೆ ಇಳಿದಿರುವ ಕಾರಣ ದಂಧೆಯನ್ನು ನಿಲ್ಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಈ ಬಗ್ಗೆ ಇನ್ನಷ್ಟು ಸುದ್ದಿ, ವಿಡಿಯೋ ದಾಖಲೆಯನ್ನು ಮುಂದಿನ ವರದಿಯಲ್ಲಿ “ವಾಯ್ಸ್ ಆಫ್ ಪಬ್ಲಿಕ್” ಪ್ರಕಟಿಸಲಿದೆ.