ಪಕ್ಷಿಕೆರೆ: ಮನೆಗೆ ನುಗ್ಗಿದ ಕಳ್ಳರು, ನಗ ನಗದು ದೋಚಿ ಪರಾರಿ

ಮುಲ್ಕಿ: ಪಕ್ಷಿಕೆರೆ ಸಮೀಪದ ಕೊಯಿಕುಡೆ ಮದರ್ ತೆರೇಸಾ ಲೇಔಟ್ ನ ಶೀಲತಾ ಪೂಜಾರಿ ಎಂಬವರ ಮನೆಯಿಂದ ಕಳ್ಳರು ಲಕ್ಷಾಂತರ ಮೌಲ್ಯದ ನಗ -ನಗದನ್ನು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.


ಶೀಲತ ರವರ ಮನೆಯವರು ಶನಿವಾರ ನಾಗರಪಂಚಮಿ ಪ್ರಯುಕ್ತ ತಮ್ಮ ತವರು ಮನೆಗೆ ಹೋಗಿದ್ದರು. ಮಂಗಳವಾರ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದದ್ದು ಬೆಳಕಿಗೆ ಬಂದಿದೆ.
ಕಳ್ಳರು ಮನೆಯ ಹಿಂಬದಿಯ ಅಡುಗೆ ಕೋಣೆಯ ಕಬ್ಬಿಣದ ಗ್ರಿಲ್ಸ್ ನ್ನು ಮೆಷಿನ್ ನಲ್ಲಿ ತುಂಡರಿಸಿ ಹಿಂಬಾಗಿಲನ್ನು ಒಡೆದು ಎರಡು ಕೋಣೆಗಳನ್ನು ಜಾಲಾಡಿ ಒಂದು ಕಪಾಟಿನ ಬೀಗ ಒಡೆದು ಅದರಲ್ಲಿದ್ದ ಸುಮಾರು ಐದು ಲಕ್ಷ ಮೊತ್ತದ ನಗ ನಗದನ್ನು ಕಳವು ಗೈದಿದ್ದಾರೆ.

ಭಾನುವಾರ ಮಧ್ಯಾಹ್ನ ಶೀಲತಾ ರವರ ಮಾವ ಜಯಶೀಲ ಪೂಜಾರಿ ಮನೆಗೆ ಬಂದು ನೋಡಿ ಪಂಜ ಮೊಗೆಪಾಡಿಯಲ್ಲಿರುವ ತಮ್ಮ ಹಳೆ ಮನೆಗೆ ಹೋಗಿದ್ದರು. ಈ ವೇಳೆ ಕಳವು ಕೃತ್ಯ ಗಮನಕ್ಕೆ ಬಂದಿರಲಿಲ್ಲ.
ಮಂಗಳವಾರ ಮಧ್ಯಾಹ್ನ ಶೀಲತಾರವರು ಮನೆಗೆ ಬಂದು ನೋಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಕೆಮ್ರಾಲ್ ಗ್ರಾ.ಪಂ. ಅಧ್ಯಕ್ಷ ಮಯ್ಶದ್ದಿ, ಸದಸ್ಯ ಸುರೇಶ್ ಪಂಜ, ಮುಲ್ಕಿ ಪೊಲೀಸರು,ಶ್ವಾನ ದಳ ಬೆರಳಚ್ಚುತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶೀಲತ ರವರ ಪತಿ ಭರತ್ ರಾಜ್ ಪೂಜಾರಿ ಕಳೆದ ಕೆಲ ದಿನಗಳ ಹಿಂದೆ ವಿದೇಶಕ್ಕೆ ಹೊಸ ಉದ್ಯೋಗಕ್ಕೆ ತೆರಳಿದ್ದರು.

error: Content is protected !!