ಹಳೆಯಂಗಡಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ-ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್ ಬಂಕ್ ಬಳಿ ಕಳೆದ ಮಂಗಳವಾರ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಹಿಟ್ ಆಂಡ್ ರನ್ ಗೆ ಇಬ್ಬರು ಬಲಿಯಾಗಿ ಒಬ್ಬ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿದ್ದ ಕಾರ್ ಚಾಲಕನನ್ನು ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಕಾರ್ ಸಮೇತ ವಶಕ್ಕೆ ಪಡೆದಿದ್ದು ಆತ ಜಾಮೀನು ಪಡೆದುಕೊಂಡಿರುವ ಮಾಹಿತಿ ಲಭಿಸಿದೆ. ಆರೋಪಿಯನ್ನು “ಮ್ಯಾಡ್ ಇನ್ ಕುಡ್ಲ” ಹೆಸರಿನ ಯೂಟ್ಯೂಬರ್ ಹಳೆಯಂಗಡಿ ಇಂದಿರಾನಗರ ನಿವಾಸಿ ಅರ್ಪಿತ್(35) ಎಂದು ಗುರುತಿಸಲಾಗಿದೆ.
ಮಧ್ಯಪ್ರದೇಶದಿಂದ ಕೇರಳ ಕಡೆಗೆ ಹೋಗುತ್ತಿದ್ದ ಲಾರಿಯ ಟೈರ್ ಪಂಕ್ಚರ್ ಆಗಿದ್ದು ಹೆದ್ದಾರಿ ಬದಿ ನಿಲ್ಲಿಸಿದ್ದ ವೇಳೆ ಅರ್ಪಿತ್ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದ ಕಾರ್ ತೀರಾ ಎಡಗಡೆಗೆ ಬಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಬಬುಲು(23), ಆಚಲ್ ಸಿಂಗ್ (30) ಸ್ಥಳದಲ್ಲೇ ಸಾವನ್ನಪ್ಪಿದ್ದು ಅವರ ಶವದ ಭಾಗಗಳು ಹೆದ್ದಾರಿ ತುಂಬಾ ಚೆಲ್ಲಾಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು. ಘಟನೆಯಲ್ಲಿ ಕೇರಳ ನಿವಾಸಿ ಅನೀಶ್(42) ಗಂಭೀರ ಗಾಯಗೊಂಡಿದ್ದಾರೆ.