ಸುರತ್ಕಲ್: ಮಂಗಳೂರು ಉತ್ತರ ಬಿಜೆಪಿ ವತಿಯಿಂದ ವಿಜಯ ಸಂಕಲ್ಪ ಅಭಿಯಾನಕ್ಕೆ ಶನಿವಾರ ಕಾವೂರು ಮೈದಾನದಲ್ಲಿ ಚಾಲನೆ ನೀಡಲಾಯಿತು.
ಮಂಗಳೂರು ಉತ್ತರ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಪ್ರಾಸ್ತಾವಿಕ ಮಾತನಾಡಿದರು. “ವಿಜಯ ಸಂಕಲ್ಪ ಅಭಿಯಾನದ ಮೂಲಕ ಮಂಗಳೂರು ಉತ್ತರದ 244 ಬೂತ್ ಗಳನ್ನು ಸಂಪರ್ಕಿಸುವ ಮೂಲಕ ಜನರಿಗೆ ಸರಕಾರದ ಸಾಧನೆಯನ್ನು ಮುಟ್ಟಿಸುವ ಕೆಲಸ ನಡೆಯಬೇಕು. ಉತ್ತರದ ಪ್ರತೀ ಮನೆ, ಅಂಗಡಿಗಳಲ್ಲಿ ಕರಪತ್ರ, ಸ್ಟಿಕ್ಕರ್ ಅಂಟಿಸುವ ಮೂಲಕ ಕಾರ್ಯಕರ್ತರು ಪಕ್ಷದ ಯಶಸ್ಸಿಗೆ ಶ್ರಮಿಸಬೇಕು. 29ರವರೆಗೆ ನಡೆಯುವ ಈ ಅಭಿಯಾನದ ಯಶಸ್ಸಿಗೆ ಎಲ್ಲರೂ ಒಂದಾಗಿ ಶ್ರಮಿಸಬೇಕು” ಎಂದರು.
ಬಳಿಕ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರು, “ಇಂದಿನಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಯನ್ನು ಪ್ರತೀ ಮನೆಗೆ ತಲುಪಿಸುವ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. 29ರಂದು ಪ್ರಧಾನಿ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಪ್ರತೀ ಬೂತ್ ಗಳಲ್ಲಿ ಎಲ್ಲರೂ ಒಟ್ಟಾಗಿ ಆಲಿಸುವ ಮೂಲಕ ಕಾರ್ಯಕ್ರಮ ಕೊನೆಗೊಳ್ಳಲಿದೆ. ಚುನಾವಣೆ ಹತ್ತಿರ ಬರುವಾಗ ಹೊಸ ಹೊಸ ವೇಷಗಳು ಬರುತ್ತವೆ. ನಾಲ್ಕೂವರೆ ವರ್ಷ ಇಲ್ಲದೆ ಇದ್ದ ವೇಷಗಳು ಈಗ ಏಕಾಏಕಿ ಕಾಣಸಿಗುತ್ತಿವೆ. ನಮ್ಮಲ್ಲೂ ಇಬ್ಬರಿದ್ದಾರೆ. ಒಬ್ಬರಿಗೆ ಫೇಸ್ಬುಕ್, ರಸ್ತೆಯಲ್ಲಿ ಬ್ಯಾನರ್ ಹಾಕುವ ಚಟವಾದರೆ ಇನ್ನೊಬ್ಬರಿಗೆ ಸುಳ್ಳು ಹೇಳುವ ಚಟ. ಇಬ್ಬರೂ ಟಿಕೆಟ್ ಸಿಕ್ಕರೆ ಮದುವೆಗೆ ಹಣ ಕೊಡುತ್ತೇನೆ, ಕಾರ್ಯಕ್ರಮಕ್ಕೆ ಹಣ ಕೊಡುತ್ತೇನೆ ಎಂದು ಊರೂರು ಅಲೆಯುತ್ತಿದ್ದಾರೆ. ತಮ್ಮನ್ನು ತಾವು ಮಹಾನ್ ಸಮಾಜ ಸೇವಕರೆಂದು ಕರೆಸಿಕೊಳ್ಳುವವರು ಕೊರೋನಾ ಸಮಯದಲ್ಲಾದ್ರೂ ಬಂದಿದ್ರೆ ನಮಗೆ ಸ್ವಲ್ಪ ಸಹಾಯ ಆಗ್ತಿತ್ತು. ಹೀಗೇ ಚುನಾವಣೆ ಬರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ವೇಷಗಳು ಕಾಣಿಸಿಕೊಳ್ಳುತ್ತವೆ. ಇವರನ್ನು ಜನರು ಗಮನಿಸುತ್ತಿರಬೇಕು. ನಮಗೆ ಚುನಾವಣೆ ಎದುರಿಸಲು ಸುಳ್ಳುಗಳು ಬೇಡ, ಭರವಸೆ ಬೇಡ. ಕೇಂದ್ರ ಮತ್ತು ರಾಜ್ಯ ಸರಕಾರ ಮಾಡಿರುವ ಕೆಲಸಗಳೇ ಸಾಕು. ಕಾರ್ಯಕರ್ತರು ರಾಜ್ಯಾದ್ಯಂತ ನಡೆಯಲಿರುವ ಈ ಅಭಿಯಾನದಲ್ಲಿ ತೊಡಗಿಸಿಕೊಂಡು ಪಕ್ಷದ ಏಳಿಗೆಗೆ ಶ್ರಮಿಸಿ” ಎಂದರು.
ವೇದಿಕೆಯಲ್ಲಿ ಮಂಗಳೂರು ಮೇಯರ್ ಜಯಾನಂದ ಅಂಚನ್, ಮಂಗಳೂರು ಉತ್ತರ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ವಿಜಯ ಸಂಕಲ್ಪ ಅಭಿಯಾನ ಜಿಲ್ಲಾ ಪ್ರಮುಖ್ ಸುಧಾಕರ್ ಅಡ್ಯಾರ್, ಪೂಜಾ ಪ್ರಶಾಂತ್ ಪೈ, ನಯನಾ ಗಣೇಶ್, ಜಿಲ್ಲಾ ವಕ್ತಾರ ಜಗದೀಶ್ ಶೇಣವ, ಸಂದೀಪ್ ಪಚ್ಚನಾಡಿ, ರಾಜೇಶ್ ಕೊಟ್ಟಾರಿ, ಮನಪಾ ಸದಸ್ಯರಾದ ಕಿರಣ್ ಕೋಡಿಕಲ್, ಶ್ವೇತಾ ಪೂಜಾರಿ, ವರುಣ್ ಚೌಟ, ಸರಿತಾ ಶಶಿಧರ್, ಲೋಕೇಶ್ ಬೊಳ್ಳಾಜೆ, ಶೋಭಾ ರಾಜೇಶ್, ಸಂಗೀತಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.