ಸುರತ್ಕಲ್: ಕುಳಾಯಿ ಹೊನ್ನಕಟ್ಟೆ ಮಸೀದಿ ಪಕ್ಕದ ರಸ್ತೆ ಕಾಮಗಾರಿ ಸಹಿತ 98 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಮಂಗಳವಾರ ಗುದ್ದಲಿಪೂಜೆ ನೆರವೇರಿಸಿದರು.
ಈ ವೇಳೆ ಮಾತಾಡಿದ ಶಾಸಕರು, “ಕುಳಾಯಿ ಹೊನ್ನಕಟ್ಟೆ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದ್ದು ಒಂದು ತಿಂಗಳೊಳಗೆ ಮುಗಿಯಲಿದೆ. ಆ ಬಳಿಕ ಸುರತ್ಕಲ್ ಜಂಕ್ಷನ್ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ಸುರತ್ಕಲ್ ಕ್ಷೇತ್ರವನ್ನು ಮಾದರಿಯನ್ನಾಗಿ ಪರಿವರ್ತಿಸಲು ವಿವಿಧ ವಾರ್ಡ್ ಗಳಲ್ಲಿ ರಸ್ತೆ ಅಭಿವೃದ್ಧಿ, ಪಾರ್ಕ್, ಕುಡಿಯುವ ನೀರು ಸಹಿತ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಾಗುತ್ತಿದೆ” ಎಂದರು.
ಕಾರ್ಪೋರೇಟರ್ ವರುಣ್ ಚೌಟ, ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಗುತ್ತಿಗೆದಾರ ಶರಣ್ ಮತ್ತಿತರರು ಉಪಸ್ಥಿತರಿದ್ದರು.