“ರಾಜೇಂದ್ರ ಕುಮಾರ್ ಮೊಳಹಳ್ಳಿ ಶಿವರಾಯರ ಬಳಿಕ ನಾಡು ಕಂಡ ಸಹಕಾರ ಕ್ಷೇತ್ರದ ಧುರೀಣ” -ಬಿ.ಎಂ. ಸುಕುಮಾರ್ ಶೆಟ್ಟಿ

ಎಸ್ ಸಿಡಿಸಿಸಿ ಬ್ಯಾಂಕ್ ಸಿದ್ಧಾಪುರ ಶಾಖೆಯ ನೂತನ ಕಟ್ಟಡ “ಉತ್ಕೃಷ್ಟ” ಲೋಕಾರ್ಪಣೆ

ಸಿದ್ಧಾಪುರ: ಎಸ್ ಸಿಡಿಸಿಸಿ ಬ್ಯಾಂಕ್ ಸಿದ್ಧಾಪುರ ಶಾಖೆಯ ನೂತನ ಕಟ್ಟಡ “ಉತ್ಕೃಷ್ಟ” ಇದರ ಉದ್ಘಾಟನೆಯನ್ನು ರವಿವಾರ ಬೈಂದೂರು ಶಾಸಕರು ಬಿ.ಎಂ. ಸುಕುಮಾರ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಬ್ಯಾಂಕ್ ಗಣಕ ಕೊಠಡಿ ಉದ್ಘಾಟಿಸಿದರು.


ಬಳಿಕ ಮಾತಾಡಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರು, “ಮೊಳಹಳ್ಳಿ ಶಿವರಾಯರ ಬಳಿಕ ನಾಡು ಕಂಡ ಅದ್ಭುತ ಸಹಕಾರ ಕ್ಷೇತ್ರದ ಧುರೀಣ ಎಂದರೆ ರಾಜೇಂದ್ರ ಕುಮಾರ್ ಅವರು. ಅವರ ಅಗತ್ಯ ಸಹಕಾರಿ ಕ್ಷೇತ್ರಕ್ಕೆ ತುಂಬಾ ಅಗತ್ಯವಿದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗೆ ಕಮ್ಮಿ ಇಲ್ಲದ ಹೆಗ್ಗುರುತು ಎಸ್ ಸಿಡಿಸಿಸಿ ಬ್ಯಾಂಕ್ ನದ್ದಾಗಿದೆ. ಇದಕ್ಕೆಲ್ಲ ರಾಜೇಂದ್ರ ಕುಮಾರ್ ಅವರ ಶ್ರಮ ಕಾರಣ. ಎಲ್ಲರಿಗೂ ಹೊಸವರ್ಷ ಶುಭ ತರಲಿ” ಎಂದು ಶುಭ ಹಾರೈಸಿದರು.


ಮಾತು ಮುಂದುವರಿಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರು, “ಒಬ್ಬರಿಗೊಬ್ಬರು ನೆರವಾಗುವುದೇ ನಿಜವಾದ ಸಹಕಾರಿ ತತ್ವ. ಇದನ್ನು ಎಸ್ ಸಿಡಿಸಿಸಿ ಬ್ಯಾಂಕ್ ಮೂಲಕ ರಾಜೇಂದ್ರ ಕುಮಾರ್ ಅವರು ಸಾಬೀತುಪಡಿಸಿದ್ದಾರೆ. ಸಿದ್ಧಾಪುರದಂತಹ ಗ್ರಾಮೀಣ ಭಾಗದಲ್ಲಿ ಅತ್ಯಾಧುನಿಕ ಸೌಕರ್ಯಗಳಿಂದ ಕೂಡಿದ ಬ್ಯಾಂಕ್ ಸ್ಥಾಪನೆಯಾಗಿರುವುದು ಜನರ ಅಭಿವೃದ್ಧಿಗೆ ಪೂರಕವಾಗಿದೆ. ಇದರಿಂದ ಗ್ರಾಮೀಣ ಪ್ರದೇಶ ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ. ಸಹಕಾರಿ ಕ್ಷೇತ್ರದಲ್ಲಿ ಹಲವಾರು ಮಂದಿ ಬಂದು ಹೋಗಿದ್ದಾರೆ. ಆದರೆ ಜನರು ನೆನಪಿಟ್ಟುಕೊಂಡಿರುವುದು ಮೊಳಹಳ್ಳಿ ಶಿವರಾಯರು ಮತ್ತು ರಾಜೇಂದ್ರ ಕುಮಾರ್ ಅವರನ್ನು. ಅವರ ಸಾಧನೆಯ ಪಯಣ ಹೊಸವರ್ಷದಲ್ಲಿ ಮುಂದುವರಿಯಲಿ” ಎಂದರು.
ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಮಾತಾಡುತ್ತಾ, “ನವೋದಯ ಸಂಘಗಳು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಲು ದೊಡ್ಡ ಸಾಧನೆಯನ್ನೇ ಮಾಡಿದೆ. ಸಹಕಾರಿ ತತ್ವದಲ್ಲಿ ಏನಾದರೂ ಬದಲಾವಣೆ ತರಬೇಕಿದ್ದರೆ, ಯೋಜನೆ ರೂಪಿಸಬೇಕಿದ್ದರೆ ಸರಕಾರಕ್ಕೆ ಮಾರ್ಗದರ್ಶನ ನೀಡಲು ರಾಜೇಂದ್ರ ಕುಮಾರ್ ಅವರ ಸಲಹೆ ಬೇಕಾಗುತ್ತದೆ. ರೈತರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು” ಎಂದರು.
ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತಾಡುತ್ತಾ, “ಎಸ್ ಸಿಡಿಸಿಸಿ ಬ್ಯಾಂಕ್ ಕೀರ್ತಿ ರಾಜ್ಯದ ಮೂಲೆ ಮೂಲೆಗಳಿಗೆ ಹರಡಿದೆ. ಶ್ರಮವಹಿಸಿ ದುಡಿದರೆ ಒಂದು ಬ್ಯಾಂಕ್ ಸಾರ್ವಜನಿಕ ವಲಯದಲ್ಲಿ ಅತ್ಯಂತ ಉನ್ನತ ಸ್ಥಿತಿಗೆ ಏರಬಹುದು ಅನ್ನೋದಕ್ಕೆ ಬ್ಯಾಂಕ್ ನ ಕಾರ್ಯಾಚರಣೆಯೇ ಸಾಕ್ಷಿಯಾಗಿದೆ. ಸಹಕಾರಿ ಕ್ಷೇತ್ರದ ವ್ಯವಸ್ಥೆಯಿಂದಾಗಿ ರಾಜ್ಯ ಸರಕಾರದ ಯಶಸ್ವಿನಿ ಯೋಜನೆ ಯಶಸ್ವಿಯಾಗಿದೆ. ಹಿಂದೆ ಮಹಿಳೆಯರು ಸ್ವಾವಲಂಬಿಗಳಾಗಿರಲಿಲ್ಲ. ಆದರೆ ಇಂದು ನವೋದಯ ಯೋಜನೆಯಿಂದಾಗಿ ಪ್ರತೀ ಮನೆಗಳಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ” ಎಂದರು.
ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತು ಮುಂದುವರಿಸಿ, “ಎಲ್ಲರೂ ಸ್ವಾವಲಂಬಿಗಳಾಗಬೇಕು. ಅರೋಗ್ಯ ಮತ್ತು ನೆಮ್ಮದಿಯನ್ನು ಭಗವಂತ ನಿಮ್ಮೆಲ್ಲರಿಗೂ ಕೊಡಲಿ. 25 ವರ್ಷಗಳಲ್ಲಿ ಕುಂದಾಪುರ ತಾಲೂಕಿನ ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸುವ ಉದ್ದೇಶದಿಂದ ಉತ್ಕೃಷ್ಟ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಸ್ವಸಹಾಯ ಗುಂಪುಗಳಿಂದ ಮಹಿಳೆಯರು ಹೆಚ್ಚಿನ ಸ್ವಾವಲಂಬಿಗಳಾಗಿದ್ದಾರೆ. ನಮಗೆ ಸಾಲ ಕೊಡಲು ಆರ್ ಟಿಸಿ ಬೇಡ, ನಿಮ್ಮ ಮೇಲಿನ ನಂಬಿಕೆಯಷ್ಟೇ ಸಾಕು. ಪುರುಷ ಪ್ರಧಾನ ಸಮಾಜದಲ್ಲಿ ಬಾಯಿಮಾತಲ್ಲಿ ಮಾತೆಯರೇ ತಾಯಂದಿರೇ ಎಂದರೆ ಸಾಲದು. ಅದನ್ನು ಕಾರ್ಯರೂಪಕ್ಕೆ ತರಬೇಕು. ಮಹಿಳೆಯರಿಗೆ ಅವಕಾಶವನ್ನು ಕೊಡಬೇಕು.
ವೇದಿಕೆಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು.
ರಘು ಪೂಜಾರಿ ಅತಿಥಿಗಳನ್ನು ಸ್ವಾಗತಿಸಿದರು. ನಿರ್ದೇಶಕ ಮಹೇಶ್ ಹೆಗ್ಡೆ ಪ್ರಾಸ್ತಾವಿಕ ಮಾತನ್ನಾಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ, ಸಿದ್ಧಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಕುಲಾಲ್, ಗಣೇಶ್ ಅಡಿಗ, ಬ್ಯಾಂಕ್ ನಿರ್ದೇಶಕರಾದ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ, ಹರಿಪ್ರಸಾದ್ ಶೆಟ್ಟಿ, ವಿನಯ್ ಕುಮಾರ್ ಸೂರಿಂಜೆ, ಬ್ಯಾಂಕ್ ಎಂ.ಡಿ. ಗೋಪಿನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!