ಸುರತ್ಕಲ್: ಅಂಗಡಿ ಮಾಲಕನಿಗೆ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಚೂರಿಯಿಂದ ಇರಿದು ಬರ್ಬರ ಹತ್ಯೆಗೈದು ಪರಾರಿಯಾದ ಘಟನೆ ಠಾಣಾ ವ್ಯಾಪ್ತಿಯ ಕೃಷ್ಣಾಪುರ ನಾಲ್ಕನೇ ಬ್ಲಾಕ್ ನಲ್ಲಿ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಅಂಗಡಿ ಮಾಲಕನನ್ನು ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಸಿಕೊಳ್ಳಲಾಗಿದ್ದು ಪರಿಸ್ಥಿತಿ ಉದ್ವಿಗ್ನಗೊಂಡು ಬೂದಿ ಮುಚ್ಚಿದ ಕೆಂಡದಂತಿದೆ.
ಕೃಷ್ಣಾಪುರ 9ನೇ ಬ್ಲಾಕ್ ನಿವಾಸಿ ಜಲೀಲ್(42) ಎಂಬವರು ನಾಲ್ಕನೇ ಬ್ಲಾಕ್ ನಲ್ಲಿ ಮೊಬೈಲ್ ರಿಚಾರ್ಜ್, ಸ್ಟೇಷನರಿ ಅಂಗಡಿ ಇಟ್ಟುಕೊಂಡಿದ್ದು ಶನಿವಾರ ರಾತ್ರಿ 8:30 ಗಂಟೆಗೆ ಅಂಗಡಿ ಶಟರ್ ಹಾಕುವಷ್ಟರಲ್ಲಿ ಸ್ಥಳಕ್ಕೆ ಬಂದ ದುಷ್ಕರ್ಮಿಗಳು ಮಾತಿನ ಚಕಮಕಿ ನಡೆಸಿ ಏಕಾಏಕಿ ಚೂರಿಯಿಂದ ದಾಳಿ ನಡೆಸಿ ಪರರಿಯಾಗಿದ್ದಾರೆ.