ಸುರತ್ಕಲ್: ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ (ರಿ) ವತಿಯಿಂದ 2022ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಕುರುವರಬೆಟ್ಟು ಹೊಸಬೆಟ್ಟುವಿಗೆ ಅಭಿನಂದನಾ ಸಮಾರಂಭ ಹೊಸಬೆಟ್ಟು ಕೋರ್ದಬ್ಬು ದೈವಸ್ಥಾನದ ಆವರಣದಲ್ಲಿ ಜರಗಿತು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ| ವೈ.ಭರತ್ ಶೆಟ್ಟಿಯವರು ಇಂದಿನ ಯುವಜನತೆ ಹಳೇಯ ಪರಂಪರೆಯ ತಾಲೀಮು ಕ್ರೀಡೆಗಳನ್ನು ಉಳಿಸಿ ಗತವೈಭವ ಮರುಕಳಿಸುವಂತೆ ಶ್ರಮವಹಿಸಬೇಕೆಂದರು.
ವಿಶೇಷ ಅತಿಥಿಗಳಾಗಿ ಆಗಮಿಸಿದ ಶಿವದೂತೆ ಗುಳಿಗೆ ನಾಟಕದ ಗುಳಿಗ ಹಾಗೂ ಕಾಂತಾರ ಚಲನಚಿತ್ರದ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ ಮತ್ತು ಅತಿಥಿಗಳಾಗಿ ಆಗಮಿಸಿದ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ವರುಣ್ ಚೌಟ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಸರಿತಾ ಶಶಿಧರ್, ಕುರುವರಬೆಟ್ಟು ಶ್ರೀ ಕೋರ್ದಬ್ಬು ದೈವಸ್ಥಾನದ ಅಧ್ಯಕ್ಷರಾದ ಸಂತೋಷ್ ಹತ್ವಾರ್ ಶುಭ ಹಾರೈಸಿದರು.
ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಪರವಾಗಿ ಅಭಿನಂದನೆಯನ್ನು ಸ್ವೀಕರಿಸಿದ ಗೌರವಾಧ್ಯಕ್ಷ ಮಧುಸೂಧನ ರಾವ್ ಮತ್ತು ಮುಖ್ಯ ಶಿಕ್ಷಕ ವಿಠಲ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಸುಮಾರು 80 ಹಿರಿ ಕಿರಿಯ ಸದಸ್ಯರನ್ನೂ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿಯವರು ಹಿರಿಯರಿಂದ ಮಾರ್ಗದರ್ಶನ ಪಡೆದ ತಾಲೀಮು ಕ್ರೀಡೆಗಳನ್ನು ಇಂದಿನ ಯುವಕರು ಮುಂದುವರಿಸಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸುವಂತೆ ಶ್ರಮಿಸಬೇಕೆಂದರು.
ಸಂಸ್ಥೆಯ ಮಹಾಪೋಷಕ ಎಸಿಪಿ ಮಹೇಶ್ ಕುಮಾರ್ , ಐ.ರಮಾನಂದ ರಾವ್ ಮತ್ತಿತರ ಗಣ್ಯರು ಮತ್ತು ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಕಳೆದ 51 ವರ್ಷಗಳಿಂದ ನಡೆದು ಬಂದ ದಾರಿಯ ಬಗ್ಗೆ ಕುಶಲ್ ಮಣಿಯಾಣಿಯವರು ಪ್ರಸ್ತಾವಿಸಿದರು.
ಪ್ರಸಾದ್ ಪ್ರಾರ್ಥಿಸಿದರು. ಕಿರಣ್ ಆಚಾರ್ಯ ಸ್ವಾಗತಿಸಿ ನಿರೂಪಿಸಿದರು.