ನಮ್ಮ ಕಂಬಳ ಪ್ರಶಸ್ತಿ – 2026 ಪ್ರದಾನ ಸಮಾರಂಭ ಕಂಬಳ ಕ್ಷೇತ್ರದ ಸಾಧಕರಿಗೆ ಸನ್ಮಾನ, ಗೌರವಾರ್ಪಣೆ, ಪುಸ್ತಕ ಬಿಡುಗಡೆ


ಮಂಗಳೂರು: ನಮ್ಮ ಕುಡ್ಲ ಚಾನೆಲ್, ನಮ್ಮ ಕುಂಬಳ ಟೀಮ್ ದುಬೈ ಮತ್ತು ಪಾಲೆಮಾರ್ ಗ್ರೂಪ್ ಆಯೋಜನೆಯಲ್ಲಿ ನಮ್ಮ ಕಂಬಳ ಪ್ರಶಸ್ತಿ – 2026 ಪ್ರದಾನ ಸಮಾರಂಭ ಮಂಗಳವಾರ ಮೇರಿಹಿಲ್‌ನ ಪಾಲೆಮಾರ್ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯಿತು. ಈ ವರ್ಷ 3ನೇ ಸೀಸನ್‌ ನ ಪ್ರಶಸ್ತಿ ಪ್ರದಾನ ಅದ್ದೂರಿಯಾಗಿ ನಡೆಯಿತು.
ಮೂಲ್ಕಿ ಸೀಮೆ ಅರಸು ಕಂಬಳದ ದುಗ್ಗಣ್ಣ ಸಾವಂತ ಅರಸರು ದೀಪ ಪ್ರಜ್ವಲನೆ ಮೂಲಕ ಸಮಾರಂಭ ಉದ್ಘಾಟಿಸಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಸಚಿವ ರಮಾನಾಥ ರೈ, ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕಂಬಳ ಅಕಾಡೆಮಿ ಸಂಸ್ಥಾಪಕರಾದ ಪ್ರೊ.ಗುಣಪಾಲ ಕಡಂಬ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಉದ್ಯಮಿ ಸುರೇಶ್ ಶೆಟ್ಟಿ ಮಿಜಾರು ಮೊದಲಾದವರು ವೇದಿಕೆಯಲ್ಲಿದ್ದರು. ಅಧ್ಯಕ್ಷತೆಯನ್ನು ಮಾಜಿ ಸಚಿವ, ಲ್ಯಾಂಡ್‌ಲಿಂಕ್ಸ್ ರೂವಾರಿ, ಉದ್ಯಮಿ ಕೃಷ್ಣ ಜೆ. ಪಾಲೆಮಾರ್ ವಹಿಸಿದ್ದರು.
2025ರ ಸಾಲಿನ ಕಂಬಳಗಳ ಸಮಗ್ರ ಮಾಹಿತಿಗಳನ್ನು ಒಳಗೊಂಡ ನಮ್ಮ ಕಂಬಳ 2025-26 ಮಾಹಿತಿ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಕೃತಿಕಾರ ನಂದಳಿಕೆ ಶ್ರೀಕಾಂತ್ ಭಟ್ ಅವರನ್ನು ಕೃಷ್ಣ ಪಾಲೆಮಾರ್‌ ಅವರು ಸನ್ಮಾನಿಸಿದರು. ಕಂಬಳ ಕ್ಷೇತ್ರದ ವಿವಿಧ ಸಾಧಕರನ್ನು ಈ ವೇಳೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ವಿಜೇತರ ಬಗ್ಗೆ ಕಂಬಳ ಕ್ಷೇತ್ರದ ಖ್ಯಾತ ನಿರೂಪಕ ಎಡ್ತೂರು ರಾಜೀವ ಶೆಟ್ಟಿ ನಿರೂಪಿಸಿದರು.
ಮುಖ್ಯ ಅತಿಥಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ನಮ್ಮ ಕುಡ್ಲ ಅಂದರೆ ಕಂಬಳ , ಕಂಬಳ ಅಂದರೆ ನಮ್ಮ ಕುಡ್ಲ ಎಂಬಂತೆ ಒಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಇಂತಹ ಒಂದು ವೇದಿಕೆ ಕಂಬಳಕ್ಕೆ ಬೇಕಾಗಿತ್ತು. ಮಳೆಗಾಲದ ಅವಧಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಖುಷಿಕೊಟ್ಟಿದೆ. ಕರಾವಳಿಯ ನಾಗಾರಾಧನೆ, ಭೂತಾರಾಧನೆಯಂತೆ ಕಂಬಳವೂ ಇಂದು ತುಳುನಾಡಿನ ಶ್ರೀಮಂತಿಕೆಯಾಗಿ ಬಿಂಬಿತವಾಗಿದೆ. ನಮ್ಮ ಕಂಬಳ ನಮ್ಮ ನೆಲದಲ್ಲೇ ಆಗುವ ಮೂಲಕ ತುಳುನಾಡಿನ ಶ್ರೀಮಂತಿಕೆ ಹೆಚ್ಚಾಗಲಿ ಎಂದರು.
ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಅವರು ಮಾತನಾಡಿ, ಇಂದು ಕ್ಯಾಮೆರಾದ ಮೂಲಕ ವಿಶ್ವದಾದ್ಯಂತ ಜನತೆ ಕಂಬಳ ಕ್ರೀಡೆಯನ್ನು ಪಸರಿಸುತ್ತಿದೆ. ನಮ್ಮ ಕುಡ್ಲ ವಾಹಿನಿ ಅತ್ಯುತ್ತಮವಾದ ಕೆಲಸ ಮಾಡುತ್ತಿದೆ. ನಮ್ಮ ಕುಡ್ಲ ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡುವ ಕಾಲ ಸನ್ನಿಹಿತವಾಗಲಿದೆ ಎಂದು ಹಾರೈಸಿದರು. ದಿಲ್ಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕಂಬಳದ ಸ್ಥಬ್ಧಚಿತ್ರದ ಪ್ರದರ್ಶನ ಮಾಡಬೇಕಾಗಿದೆ ಎಂದರು.

Screenshot

ಹಿರಿಯ ಓಟಗಾರ, ಕ್ರೀಡಾ ರತ್ನ ನಕ್ರೆ ಜಯಕರ ಮಡಿವಾಳ ಅವರಿಗೆ “ಕಂಬಳ ಬೊಳ್ಳಿ-2026” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಂಬಳ ಕ್ಷೇತ್ರದ ಏಕೈಕ ಮಹಿಳಾ ಸಂಘಟಕಿ ಮಲ್ಲಿಕಾ ಯಶವಂತ ಶೆಟ್ಟಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ನಮ್ಮ ಕುಡ್ಲ ಪ್ರಶಸ್ತಿ ಕುರಿತು ಗುಣಪಾಲ ಕಡಂಬ ವಿವರಣೆ ನೀಡಿ ನವದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಗಣರಾಜ್ಯೋತ್ಸವದ ಸ್ತಬ್ಧಚಿತ್ರದ ಪ್ರದರ್ಶನ ಆಗಬೇಕಾಗಿದೆ. ಮೈಸೂರು ದಸರಾ ಕಂಬಳವನ್ನು ಹೇಗೆ ಮಾಡಬೇಕಾಗಿದೆ ಎನ್ನುವುದನ್ನು ಎಲ್ಲರೂ ಚಿಂತನೆ ಮಾಡಬೇಕಾಗಿದೆ ಎಂದರು. ಒಂದು ಕಾಲದಲ್ಲಿ ಮಹಿಳೆಯರು ಕಂಬಳದಿಂದ ದೂರವಾಗಿದ್ದ ಕಾಲದಲ್ಲಿ ಒಂದು ಮಹಿಳೆಯರೂ ಕಂಬಳ ಕ್ಷೇತ್ರಕ್ಕೆ ಬಂದಿರುವುದು ಪ್ರಗತಿ ಸಂಕೇತವಾಗಿದೆ ಎಂದರು. ಕಂಬಳ ಸಂಯೋಜಕರು, ತೀರ್ಪುಗಾರರು, ನಿರ್ವಾಹಕರು ಹಾಗೂ ಅನುಭವಿ ಕೋಣ ಬಿಡಿಸುವವರಿಗೆ ಗೌರವ ಸ್ಮರಣಿಕೆಗಳೊಂದಿಗೆ ಗೌರವಿಸಲಾಯಿತು.
ವೇದಿಕೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ , ನಮ್ಮ ಕುಡ್ಲ ವಾಹಿನಿ ನಿರ್ದೇಶಕರಾದ ಹರೀಶ್ ಕರ್ಕೇರ, ಸುರೇಶ್‌ ಕರ್ಕೇರಾ, ಮೋಹನ್ ಕರ್ಕೇರ, ಲೀಲಾಕ್ಷ ಬಿ ಕರ್ಕೇರ, ಸಂತೋಷ್ ಕರ್ಕೇರ, ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲು ಮೊದಲಾದವರಿದ್ದರು. ಸಿಒಒ ಕದ್ರಿ ನವನೀತ ಶೆಟ್ಟಿ, ನಿತಿನ್‌ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ದಿಯಾ ಎಸ್ ಆಚಾರ್ಯ ಪ್ರಾರ್ಥಿಸಿದರು.

error: Content is protected !!