ತಣ್ಣೀರುಬಾವಿ-ತೋಟಬೆಂಗ್ರೆ ಸಾಮೂಹಿಕ ಅ*ತ್ಯಾಚಾರ: ನಾಲ್ವರು ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ – 74,000 ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶ!!

ಮಂಗಳೂರು: ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ಪೀಠಾಧಿಕಾರಿ ಜಗದೀಶ ವಿ. ಎನ್. ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣದ ತೀರ್ಪನ್ನು ದಿನಾಂಕ 30.07.2026 ರಂದು ಪ್ರಕಟಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದ್ದಾರೆ.

ಪ್ರಜ್ವಲ್, ಅರುಣ್ ಅಮೀನ್, ಆದಿತ್ಯ ಸಾಲ್ಯಾನ್, ಅಬ್ದುಲ್ ರಿಯಾಜ್ ನ್ಯಾಯಾಲಯದಿಂದ ಶಿಕ್ಷೆಗೊಳಗಾದವರು

ಘಟನೆಯ ಹಿನ್ನೆಲೆ:
ದಿನಾಂಕ 18.11.2013 ರಂದು ಮಧ್ಯಾಹ್ನ 12.30 ಗಂಟೆಗೆ ಆರೋಪಿಗಳಾದ ಪ್ರಜ್ವಲ್, ಅರುಣ್ ಅಮೀನ್, ಆದಿತ್ಯ ಸಾಲ್ಯಾನ್, ಅಬ್ದುಲ್ ರಿಯಾಜ್ ಹಾಗೂ ಮೂವರು ಅಪ್ರಾಪ್ತ ಬಾಲಕರು ಸಂತ್ರಸ್ತೆಯ ಬಳಿ ಬಂದು ಅವಳ ಹೆಸರು, ಊರು ಹಾಗೂ ಜಾತಿಯನ್ನು ಪರಿಚಯಿಸಿಕೊಂಡಿದ್ದಾರೆ. ಬಳಿಕ ಸಂತ್ರಸ್ತೆಯ ಜೊತೆ ಬಂದಿದ್ದ ಗೆಳೆಯನಿಗೆ ಹಲ್ಲೆ ನಡೆಸಿ ದೂರ ಕರೆದುಕೊಂಡು ಹೋಗಿ ತಡೆಹಿಡಿದು, ಸಂತ್ರಸ್ತೆಯನ್ನು ಗಿಡಮರಗಳಿರುವ ಸ್ಥಳಕ್ಕೆ ಎಳೆದುಕೊಂಡು ಹೋಗಿ ಪ್ರಾಣ ಬೆದರಿಕೆ ಹಾಕಿ ಬಲವಂತವಾಗಿ ಒಬ್ಬರ ನಂತರ ಒಬ್ಬರು ಸರದಿಯಲ್ಲಿ ಅತ್ಯಾಚಾರವೆಸಗಿರುತ್ತಾರೆ.

ಕೃತ್ಯದ ಬಗ್ಗೆ ಯಾರಿಗಾದರೂ ತಿಳಿಸಿದರೆ ಸಂತ್ರಸ್ತೆಯನ್ನು ಹಾಗೂ ಆಕೆಯ ಗೆಳೆಯನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾರೆ. ಅತ್ಯಾಚಾರ ನಡೆಸುವ ಸಂದರ್ಭದಲ್ಲಿ ಆರೋಪಿಯೊಬ್ಬನು ಆಕೆಯ ಮೊಬೈಲ್ ಕಸಿದುಕೊಂಡು ಅದರಲ್ಲಿ ತನ್ನ ಹೆಸರು ಮತ್ತು ಮೊಬೈಲ್ ನಂಬರ್ ಅನ್ನು ಸೇವ್ ಮಾಡಿಕೊಟ್ಟಿದ್ದ.

ತನಿಖೆ ಮತ್ತು ವಿಚಾರಣೆ:
ಈ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ: 60/2018 ರಡಿ ಪ್ರಕರಣ ದಾಖಲಾಗಿದ್ದು, ಅಂದಿನ ಪೊಲೀಸ್ ನಿರೀಕ್ಷಕರಾದ ಕಲಾವತಿ.ಕೆ ಹಾಗೂ ಸಹಾಯಕ ಪೊಲೀಸ್ ಆಯುಕ್ತರಾದ ಮಂಜುನಾಥ್ ಶೆಟ್ಟಿ ತನಿಖೆ ನಡೆಸಿದ್ದರು. ನಂತರ ಅಂದಿನ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಗೌಡ.ಆರ್ ರವರು ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಪ್ರಕರಣದಲ್ಲಿ ಒಟ್ಟು 65 ಸಾಕ್ಷಿದಾರರ ಪೈಕಿ 40 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿದ್ದು, ದಿನಾಂಕ 09/01/2020 ರಂದು ಆರಂಭವಾದ ಸಾಕ್ಷಿ ವಿಚಾರಣೆಯು ದಿನಾಂಕ 09/04/2024 ರಂದು ಪೂರ್ಣಗೊಂಡಿರುತ್ತದೆ. ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ ನಾಯಕ ರವರು ವಾದ ಮಂಡಿಸಿರುತ್ತಾರೆ.

ನ್ಯಾಯಾಲಯದ ತೀರ್ಪು ಮತ್ತು ಶಿಕ್ಷೆಯ ವಿವರ:
ಪ್ರಕರಣದ 1 ರಿಂದ 4ನೇ ಆರೋಪಿಗಳಾದ ಪ್ರಜ್ವಲ್, ಅರುಣ್ ಅಮೀನ್, ಆದಿತ್ಯ ಸಾಲ್ಯಾನ್ ಮತ್ತು ಅಬ್ದುಲ್ ರಿಯಾಜ್ ರವರ ಮೇಲಿನ ಆರೋಪಗಳು ಸಾಬೀತಾಗಿದ್ದು, ನ್ಯಾಯಾಲಯವು ಶಿಕ್ಷೆ ಹಾಗೂ ದಂಡ ವಿಧಿಸಿದೆ:
ಭಾ.ದಂ.ಸಂ ಕಲಂ 376(1) ಜೊತೆ 34 ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆಯಡಿ 10 ವರ್ಷಗಳ ಕಠಿಣ ಸಜೆ ಮತ್ತು ತಲಾ 10,000/- ರೂ. ದಂಡ (ದಂಡ ಪಾವತಿಸಲು ತಪ್ಪಿದಲ್ಲಿ 2 ವರ್ಷಗಳ ಕಠಿಣ ಸಜೆ).,
ಭಾ.ದಂ.ಸಂ ಕಲಂ 354 ಜೊತೆ 34 ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ 1 ವರ್ಷದ ಸಜೆ ಮತ್ತು ತಲಾ 5,000/- ರೂ. ದಂಡ (ದಂಡ ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ).
‘ಭಾ.ದಂ.ಸಂ ಕಲಂ 506 ಜೊತೆ 34 ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ 1 ವರ್ಷದ ಶಿಕ್ಷೆ ಮತ್ತು ತಲಾ 2,000/- ರೂ. ದಂಡ (ದಂಡ ತಪ್ಪಿದಲ್ಲಿ 15 ದಿನಗಳ ಸಾದಾ ಸಜೆ).
ಭಾ.ದಂ.ಸಂ ಕಲಂ 323 ಜೊತೆ 34 ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ 6 ತಿಂಗಳ ಸಜೆ ಮತ್ತು ತಲಾ 1,000/- ರೂ. ದಂಡ (ದಂಡ ತಪ್ಪಿದಲ್ಲಿ 15 ದಿನಗಳ ಸಾದಾ ಸಜೆ).
ಭಾ.ದಂ.ಸಂ ಕಲಂ 341 ಜೊತೆ 34 ರಡಿ ತಲಾ 500/- ರೂ. ದಂಡ ವಿಧಿಸಲಾಗಿದೆ.

ಪರಿಹಾರ ಹಾಗೂ ಇಲಾಖಾ ಆದೇಶಗಳು:
ವಿಧಿಸಲಾದ ಎಲ್ಲಾ ಸಜೆಗಳನ್ನು ಆರೋಪಿಗಳು ಏಕಕಾಲಕ್ಕೆ ಅನುಭವಿಸಲು ನ್ಯಾಯಾಲಯ ಆದೇಶಿಸಿದೆ. ಒಟ್ಟು ಸಂಗ್ರಹವಾಗುವ 74,000/- ರೂ. ದಂಡದ ಮೊತ್ತದಲ್ಲಿ 60,000/- ರೂ. ಗಳನ್ನು ಸಂತ್ರಸ್ತೆಗೆ ನೀಡಲು ಹಾಗೂ ಉಳಿದ 14,000/- ರೂ. ಗಳನ್ನು ಸರ್ಕಾರಕ್ಕೆ ಪಾವತಿಸಲು ಆದೇಶಿಸಲಾಗಿದೆ.

ಹಾಗೆಯೇ ಸಂತ್ರಸ್ತೆಯ ಮೊಬೈಲ್ ಅನ್ನು ಅವಳಿಗೇ ಹಿಂದಿರುಗಿಸಲು ಮತ್ತು ಕೃತ್ಯಕ್ಕೆ ಬಳಸಿದ ಆರೋಪಿಗಳ ಮೊಬೈಲ್‌ಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯವು ಆದೇಶ ಹೊರಡಿಸಿದೆ.

error: Content is protected !!