ಕೊಲ್ಲೂರು: ಹೆಣದ ಚಿನ್ನವನ್ನೂ ಬಿಡದೆ ದೋಚಿದ ಪಾಪಿಗಳು!

ಕೊಲ್ಲೂರು: ಅಪಘಾತದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡ ಮಹಿಳೆಯ ಮೈಮೇಲಿದ್ದ ಚಿನ್ನದ ಆಭರಣಗಳನ್ನು ಲಪಟಾಯಿಸಿರುವ ಕಳ್ಳರ ವಿಕೃತ ಮನಸ್ಥಿತಿಯ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ಮೇ 17ರಂದು ಕೊಲ್ಲೂರಿನ ದಳಿ ಎಂಬಲ್ಲಿ ಕೇರಳ ಮೂಲದ ಪ್ರವಾಸಿಗರು ಪ್ರಯಾಣಿಸುತ್ತಿದ್ದ ಜೀಪಿಗೆ ಮೀನು ಸಾಗಾಟದ ಇನ್ಸುಲೇಟರ್ ವಾಹನವೊಂದು ಭೀಕರವಾಗಿ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಕೇರಳದ ಪ್ರವಾಸಿಗರಾದ ಜ್ಯೋತಿ ಮತ್ತು ಅರಿಯಾ ಅನೂಫ್ ಎಂಬವರು ಮೃತಪಟ್ಟಿದ್ದರು. ಅಲ್ಲದೆ, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದರು.

ಅಪಘಾತದ ಕರುಣಾಜನಕ ಪರಿಸ್ಥಿತಿಯಲ್ಲಿ ಸ್ಥಳೀಯರು ಮತ್ತು ಪೊಲೀಸರು ಗಾಯಾಳುಗಳ ರಕ್ಷಣೆಯಲ್ಲಿ ನಿರತರಾಗಿದ್ದ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಮೃತ ದೇಹದ ಮೇಲಿನಿಂದಲೇ ಸುಮಾರು 18 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕದ್ದೊಯ್ದಿದ್ದಾರೆ.

ಘಟನೆ ನಡೆದು ಒಂದು ವಾರದ ನಂತರ ಮೃತ ಜ್ಯೋತಿ ಅವರ ಕುಟುಂಬಸ್ಥರಿಗೆ ಚಿನ್ನದ ಆಭರಣಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಅವರು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ನೀಚ ಕೃತ್ಯಕ್ಕೆ ಸ್ಥಳೀಯರು ತೀವ್ರ ಆಕ್ರೋಶ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ. ಕೊಲ್ಲೂರು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಶಂಕಿತರ ಪತ್ತೆಗೆ ಬಲೆ ಬೀಸಿದ್ದಾರೆ.

error: Content is protected !!