ಭಟ್ಕಳ ಜಲದುರಂತ: ಸಮುದ್ರದ ಅಲೆಗೆ 11 ಮಂದಿ ಬಲಿ; ಅನಾಥರಾದ ಮಕ್ಕಳು!

ಕಾರವಾರ: ಒಂದು ಹೊತ್ತಿನ ಗಂಜಿಗಾಗಿ ಕಡಲನ್ನೇ ನಂಬಿ ಬದುಕುತ್ತಿದ್ದ ಆ ಕರಾವಳಿಯ ಬಡ ಕುಟುಂಬಗಳ ಪಾಲಿಗೆ, ಆ ಸಮುದ್ರವೇ ಇಂದು ಜವರಾಯನಾಗಿ ಪರಿಣಮಿಸಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿ ಕಡಲತೀರದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಸಮುದ್ರದ ರಕ್ಕಸ ಅಲೆಗಳ ಅಬ್ಬರಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ನಿನ್ನೆ ಹತ್ತು ಮೃತದೇಹಗಳು ಪತ್ತೆಯಾಗಿದ್ದರೆ, ಇಂದು ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಅವರ ಶವವೂ ಪತ್ತೆಯಾಗುವುದರೊಂದಿಗೆ ಇಡೀ ಕರಾವಳಿ ತೀರ ಕಣ್ಣೀರಿನ ಕಡಲಲ್ಲಿ ಮುಳುಗಿದೆ.

ಎನ್‌ಡಿಆರ್‌ಎಫ್ (NDRF) ಮತ್ತು ಸಾಹಸಿ ಈಶ್ವರ ಮಲ್ಪೆ ತಂಡ ಜಂಟಿಯಾಗಿ ನಡೆಸಿದ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಕೊನೆಯ ಮೃತದೇಹವನ್ನು ಹೊರತೆಗೆಯಲಾಗಿದೆ. ಕಡಲಿನ ಅಬ್ಬರಕ್ಕೆ 11 ಜೀವಗಳು ಜಲಸಮಾಧಿಯಾಗಿದ್ದರೆ, ಇಬ್ಬರು ಮಹಿಳೆಯರನ್ನು ಸ್ಥಳೀಯರು ಹರಸಾಹಸಪಟ್ಟು ಬದುಕಿಸಿದ್ದಾರೆ. ಆದರೆ, ಮೃತರ ಹಿನ್ನೆಲೆ ಹಾಗೂ ಅಲ್ಲಿ ನಡೆದ ಕರುಣಾಜನಕ ಘಟನೆಗಳು ಮಾತ್ರ ಕಲ್ಲು ಮನಸ್ಸಿನವರನ್ನೂ ಕಣ್ಣೀರಿಸುವಂತಿವೆ.

ತಾಯಿಯ ಪ್ರಾಣ ಉಳಿಸಲು ಹೋದ ಮಗನೇ ಜಲಸಮಾಧಿ!
ಈ ಭೀಕರ ದುರಂತದಲ್ಲಿ ತಾಯಿ-ಮಗನಿಬ್ಬರೂ ಒಟ್ಟಿಗೇ ಕೊನೆಯುಸಿರೆಳೆದ ಘಟನೆ ಅತ್ಯಂತ ಮನಕಲಕುವಂತಿದೆ. ಮೃತ ಮಾಸ್ತಮ್ಮ ನಾಯ್ಕ್ ನೀರಿನಲ್ಲಿ ಕಪ್ಪೆಚಿಪ್ಪು ಹೆಕ್ಕುತ್ತಿದ್ದರೆ, ಅವರ ಮಗ ಉಮೇಶ್ ನಾಯ್ಕ್ ಸಮೀಪದ ಬಂಡೆಯ ಮೇಲೆ ಚಿಪ್ಪುಗಳನ್ನು ಸಂಗ್ರಹಿಸುತ್ತಿದ್ದ. ಇದ್ದಕ್ಕಿದ್ದಂತೆ ತಾಯಿ ಅಲೆಯ ಹೊಡೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗುವುದನ್ನು ಕಂಡ ಮಗ, ಕ್ಷಣಮಾತ್ರವೂ ಯೋಚಿಸದೆ ಹೆತ್ತ ತಾಯಿಯನ್ನು ಉಳಿಸಲು ಆರ್ಭಟಿಸುವ ಸಮುದ್ರಕ್ಕೆ ಧುಮುಕಿದ್ದಾನೆ.

ತಾಯಿ ಕೊಂಚ ದಪ್ಪಗಿದ್ದ ಕಾರಣ ಉಮೇಶ್ ಎಷ್ಟೇ ಹರಸಾಹಸ ಪಟ್ಟರೂ ಆಕೆಯನ್ನು ದಡಕ್ಕೆ ಎಳೆಯಲು ಸಾಧ್ಯವಾಗಲಿಲ್ಲ. ಕೊನೆಗೆ ತಾಯಿಯ ಪ್ರಾಣ ಪಕ್ಷಿ ಹಾರಿಹೋಯಿತು. ಅಸಹಾಯಕನಾಗಿ ಮಗ ಉಮೇಶ್ ನೀರಿನಿಂದ ದಡದ ಕಡೆಗೆ ಮರಳುವಾಗ, ಅಲ್ಲಿ ಮುಳುಗುತ್ತಿದ್ದ ಮತ್ತಿಬ್ಬರು ಮಹಿಳೆಯರು ರಕ್ಷಣೆಗಾಗಿ ಆತನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಭಾರ ತಡೆಯಲಾರದೆ ಉಮೇಶ್ ಕೂಡ ಅವರೊಂದಿಗೆ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ.” ಹೆತ್ತ ತಾಯಿಯ ಮಮತೆಗೆ ಮಗ ಬಲಿಯಾದ ಕಥೆ ಇಡೀ ಗ್ರಾಮಸ್ಥರನ್ನು ಕರಗಿಸಿದೆ.

ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾದ ಮಕ್ಕಳು
ಈ ಜಲದೈವದ ಆಟಕ್ಕೆ ಹಸನ್ಮುಖಿ ಕುಟುಂಬವೊಂದು ಸಂಪೂರ್ಣವಾಗಿ ಬೀದಿಗೆ ಬಿದ್ದಿದೆ. ಕಪ್ಪೆಚಿಪ್ಪು ಹೆಕ್ಕಲು ಹೋಗಿದ್ದ ಮಾದೇವ ನಾಯ್ಕ್ ಮತ್ತು ಲಕ್ಷ್ಮಿ ನಾಯ್ಕ್ ಎಂಬ ದಂಪತಿಯಿಬ್ಬರೂ ಒಟ್ಟಿಗೇ ಸಮುದ್ರದ ಒಡಲು ಸೇರಿದ್ದಾರೆ. ಹೆತ್ತ ತಂದೆ-ತಾಯಿ ಇಬ್ಬರನ್ನೂ ಒಂದೇ ಕ್ಷಣದಲ್ಲಿ ಕಳೆದುಕೊಂಡ ಮಕ್ಕಳಾದ ದರ್ಶನ (23) ಹಾಗೂ ಕೀರ್ತನಾ (20) ಈಗ ಜಗತ್ತಿನಲ್ಲಿ ದಿಕ್ಕಿಲ್ಲದಂತಾಗಿದ್ದಾರೆ. ಹೆತ್ತವರ ಶವದ ಮುಂದೆ ನಿಂತು ಆ ಮಕ್ಕಳು ಹಾಕುತ್ತಿರುವ ಆಕ್ರಂದನ ನೆರೆದಿದ್ದವರ ಎದೆ ಸೀಳುವಂತಿತ್ತು.

ದುರಂತದ ಮತ್ತೊಂದು ಕರಾಳ ಮುಖವೆಂದರೆ ಮೃತ ಲಕ್ಷ್ಮೀ ಶಿವರಾಮ ನಾಯ್ಕ್ ಅವರ ಕಥೆ. ಇವರ ಪತಿ ಹತ್ತು ವರ್ಷಗಳ ಹಿಂದೆಯೇ ಕಾಲವಾಗಿದ್ದರು. ಅಂದಿನಿಂದ ಇಂದಿನವರೆಗೆ ಕೂಲಿ ನಾಲಿ ಮಾಡಿ, ತಾನೊಬ್ಬಳೇ ಕಷ್ಟಪಟ್ಟು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿದ್ದ ತನ್ನ ನಾಲ್ವರು ಪುಟ್ಟ ಮಕ್ಕಳಿಗೆ ತಾಯಿಯೂ ಆಗಿ, ತಂದೆಯೂ ಆಗಿ ಆಸರೆಯಾಗಿದ್ದರು. “ಅಮ್ಮ ಸಂಜೆ ಬರ್ತಾಳೆ, ತಮಗೇನೋ ತರ್ತಾಳೆ” ಎಂದು ಕಾಯುತ್ತಿದ್ದ ಆ ನಾಲ್ಕು ಮುಗ್ಧ ಜೀವಗಳಿಗೆ ತಾಯಿ ಇನ್ನಿಲ್ಲ ಎಂಬ ಸತ್ಯ ಇನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಒಟ್ಟಾರೆಯಾಗಿ, ಹೊಟ್ಟೆಪಾಡಿಗಾಗಿ ಹೋದ ಕರಾವಳಿಯ ಬಡ ಜೀವಗಳು ಇಂದು ಶವವಾಗಿ ಮನೆಗೆ ಮರಳಿವೆ. ಸಮುದ್ರದ ಅಲೆಗಳು ಸೃಷ್ಟಿಸಿದ ಈ ಮೌನ, ಭಟ್ಕಳದ ಇತಿಹಾಸದಲ್ಲೇ ಎಂದೂ ಮರೆಯಲಾಗದ ಕಪ್ಪು ಚುಕ್ಕೆಯಾಗಿ ಉಳಿಯಲಿದೆ.

error: Content is protected !!