ಉಡುಪಿ: ತಾಲೂಕಿನ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಾಲಯದಲ್ಲಿ ಪುರಾಣೋಕ್ತ ಕಥಾನಕದ ನಿರೂಪಣಾ ಶಿಲ್ಪಗಳಿರುವ ಅಪೂರ್ವ, ವಿಶಿಷ್ಠ ಕೆತ್ತನೆಯುಳ್ಳ ದೀಪ ಪತ್ತೆಯಾಗಿದೆ.
ದುಂಡನೆಯ ತಳವನ್ನು ಹೊಂದಿರುವ ದೀಪದ ಮೇಲ್ಭಾಗದಲ್ಲಿ ಕಮಾನಿನ ಆಕಾರದ ಅತ್ಯಂತ ಕಲಾತ್ಮಕವಾದ ಫಲಕವಿದೆ. ಈ ಫಲಕದ ಎರಡೂ ಬದಿಗಳಲ್ಲಿ ಶೈವ ಮತ್ತು ವೈಷ್ಣವ ಪಂಥದ ಶಿಲ್ಪಗಳಿದ್ದು, ದೇವಾಲಯದ ಶೈವ ಮತ್ತು ವೈಷ್ಣವ ಪರಂಪರೆಯ ಅಪರೂಪದ ಪ್ರತೀಕವಾಗಿದೆ. ದೀಪದ ಮೊದಲ ಮುಖದ ಮಧ್ಯದಲ್ಲಿ ಕಾಲಪುರುಷನ ಮೇಲೆ ನಿಂತಿರುವ ನಟರಾಜನ ಶಿಲ್ಪವಿದೆ. ಎಡ-ಬಲದಲ್ಲಿ ನಗಾರಿಯನ್ನು ಬಾರಿಸುವ ಗಣಧಾರಿ ಹಾಗೂ ತಾಳವನ್ನು ನುಡಿಸುತ್ತಿರುವ ಭೃಂಗಿಯ ಶಿಲ್ಪಗಳಿವೆ. ಭೃಂಗಿಯ ಬಲಭಾಗದಲ್ಲಿ ಖಡ್ಗರಾವಣ ಮತ್ತು ಕುಮಾರ ಶಿಲ್ಪಗಳಿವೆ. ಖಡ್ಗ ರಾವಣ ಅರೆ ಬೆತ್ತಲೆಯಾಗಿ ವಿಸ್ಮಯಮುದ್ರೆಯಲ್ಲಿ ನಿಂತಿರುವ ಮಾರಿಯ ಭುಜದ ಮೇಲೆ ಆಸೀನನಾಗಿದ್ದಾನೆ. ಕುಮಾರ ಮಯೂರ ವಾಹನನಾಗಿದ್ದಾನೆ. ನಗಾರಿ ಬಾರಿಸುವ ಗಣಧಾರಿಯ ಎಡಕ್ಕೆ ನಂದಿವಾಹನೆ ಪಾರ್ವತಿ ಮತ್ತು ಮೂಷಿಕ ವಾಹನಗಣಪತಿಯ ಶಿಲ್ಪಗಳಿವೆ.
ಈ ಶಿಲ್ಪಗಳು ಅತ್ಯಂತ ಸ್ಪಷ್ಟವಾಗಿ ಶಿವನ ಪ್ರಳಯ ತಾಂಡವ ಸನ್ನಿವೇಶವನ್ನು ಚಿತ್ರಿಸುತ್ತವೆ. ಎರಡನೇ ಮುಖದ ಮಧ್ಯದಲ್ಲಿ ಅನಂತಪದ್ಮನಾಭ ಸಮಭಂಗಿಯಲ್ಲಿ ನಿಂತಿದ್ದಾನೆ. ಆತನ ಬಲಭಾಗದಲ್ಲಿ ಇಂದ್ರ ಮತ್ತು ಬ್ರಹ್ಮ ಹಾಗೂ ಎಡಭಾಗದಲ್ಲಿ ಅಗ್ನಿ ಮತ್ತು ವರುಣನ ಶಿಲ್ಪಗಳಿವೆ. ಶಿವನ ಪ್ರಳಯ ತಾಂಡವ ನೃತ್ಯದಿಂದ ಭೀತಿಗೊಂಡ ದೇವತೆಗಳು ಬ್ರಹ್ಮನ ಜತೆಗೂಡಿ ವೈಕುಂಠಕ್ಕೆ ತೆರಳಿ ನಾರಾಯಣನಲ್ಲಿ ಪ್ರಾರ್ಥನೆ ಮಾಡಿದಾಗ ಮೂರು ಲೋಕಗಳ ಪಾಲಕನಾದ ಅನಂತಪದ್ಮನಾಭ ದೇವತೆಗಳಿಗೆ ಅಭಯ ನೀಡಿ ಶಿವನ ಕೋಪವನ್ನು ಶಮನಗೊಳಿಸುತ್ತಾನೆ. ಅನಂತಪದ್ಮನಾಭ ತನ್ನ ಎರಡೂ ಕೈಗಳಲ್ಲಿ ಉದ್ದರಣೆಯನ್ನು ಹಿಡಿದು ನಿಂತಂತೆ ಶಿಲ್ಪವನ್ನು ಚಿತ್ರಿಸಲಾಗಿದೆ. ಈ ಶಿಲ್ಪದ ಕೆಳಭಾಗದಲ್ಲಿ ನಿಂತಿರುವ ಗರುಡನ ಶಿಲ್ಪವಿದೆ. ಇದರ ಹಿಂಭಾಗದಲ್ಲಿ ಅಂಜಲೀ ಮುದ್ರೆಯಲ್ಲಿ ಕುಳಿತು ಶಾಂತವಾಗಿ ಅನಂತಪದ್ಮನಾಭನನ್ನು ಪ್ರಾರ್ಥಿಸುತ್ತಿರುವ ಶಿವನ ಶಿಲ್ಪವಿದೆ.
ದೇವಾಲಯದ ಒಳಪ್ರಾಕಾರದಲ್ಲಿ ಬಸವಣ್ಣರಸ ಬಂಗನ ಕ್ರಿ.ಶ. 1456 ಶಾಸನವಿದೆ. ಆ ಶಾಸನದಲ್ಲಿ, ಬಸವಣ್ಣರಸ ಬಂಗನು ದೇವಾಲಯಕ್ಕೆ ನೀಡಿದ ಎರಡು ಕಂಚಿನ ದೀಪದ ಉಲ್ಲೇಖದೆ. ದೀಪದಲ್ಲಿರುವ ಶಿಲ್ಪದ ಲಕ್ಷಣಗಳು ಮತ್ತು ಶಾಸನದ ಉಲ್ಲೇಖದ ಆಧಾರದ ಮೇಲೆ ಈ ದೀಪದ ಕಾಲವನ್ನು 15ನೇ ಶತಮಾನದ ದೀಪವೆಂದು ನಿರ್ಣಯಿಸಲಾಗಿದೆ. ದೀಪದಲ್ಲಿರುವ ಖಡ್ಗ ರಾವಣನ ಶಿಲ್ಪ ಅತ್ಯಂತ ಕುತೂಹಲಕರವಾಗಿದೆ. ಅರೆಬೆತ್ತಲೆಯಾಗಿ ವಿಸ್ಮಯ ಮುದ್ರೆಯಲ್ಲಿ ನಿಂತಿರುವ ಮಾರಿಯ ಭುಜದ ಮೇಲೆ ಆಸೀನವಾಗಿರುವ ಖಡ್ಗ ರಾವಣ ತನ್ನ ಬಲಮುಂದಿನ ಕೈಯಲ್ಲಿ ಖಡ್ಗ ಹಾಗೂ ಹಿಂದಿನ ಕೈಯಲ್ಲಿ ನೇಗಿಲನ್ನು ಹಿಡಿದಿದ್ದಾನೆ. ಎಡಮುಂದಿನ ಕೈಯಲ್ಲಿ ಕಪಾಲ ಅಥವಾ ಪಾನಪಾತ್ರೆಯಿದೆ ಹಾಗೂ ಎಡಹಿಂದಿನ ಕೈಯಲ್ಲಿ ರುಂಡವಿದೆ. ಈ ಶಿಲ್ಪ ಲಕ್ಷಣಗಳು ಖಡ್ಗ ರಾವಣ ಪಾಲಕ ಮತ್ತು ವಿನಾಶಕ ಶಕ್ತಿಯ ದ್ಯೋತಕವಾಗಿದೆ. ದೇವಾಲಯದ ಹೊರ ಆವರಣದಲ್ಲಿ ರಾವಣನನ್ನು ದೇವಾಲಯದ ಪ್ರಬಲ ರಕ್ಷಕ ದೈವವಾಗಿ ಆರಾಧಿಸಲಾಗುತ್ತಿರುವುದು ವಿಶೇಷವಾಗಿದೆ.
ಅಧ್ಯಯನಕ್ಕೆ ದೇವಾಲಯದ ಆಡಳಿತ ಮಂಡಳಿಯ ಅನುವಂಶಿಕ ಮೊಕ್ತೇಸರ ಪ್ರಮೋದ್ ರೈ ಪಳಜೆ, ಆಡಳಿತಾಧಿಕಾರಿ ಗುರುರಾಜ್ ಹಾಗೂ ದೇವಾಲಯದ ಪ್ರಧಾನ ಅರ್ಚಕರು, ಆಡಳಿತ ಮಂಡಳಿಯ ಸದಸ್ಯರು ಸಹಕರಿಸಿದ್ದಾರೆ ಎಂದು ಇತಿಹಾಸ ಹಾಗೂ ಪುರಾತಣ್ತೀ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಆದಿಮ ಕಲಾ ಟ್ರಸ್ಟ್ ಸ್ಥಾಪಕ ಸದಸ್ಯ ಪ್ರೊ| ಮುರುಗೇಶಿ ಟಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝